ಜನತಾ ಕರ್ಫ್ಯೂ : ಎಪಿಎಂಸಿಯಲ್ಲಿ ಕೊಳೆಯುತ್ತಿರುವ ತರಕಾರಿ

ಕೋಲಾರ, ಮೇ ೨-೨ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಾಂಡವಾಡುತ್ತಿದೆ. ಇನ್ನೊಂ ದೆಡೆ ಜನತಾ ಕರ್ಫ್ಯೂನಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋಲಾರದ ಎಪಿಎಂಸಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ತರಕಾರಿಗಳು- ಹೂ ಖರೀದಿಯಾಗದೆ ಕೊಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಕಣ್ತೆರೆದು ನೋಡುತ್ತಿಲ್ಲ. ಜಿಲ್ಲಾಡಳಿತವೂ ಇಲ್ಲಿನ ವಾಸ್ತವಾಂಶವನ್ನ ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ, ಮತ್ತು ಕೃಷಿ ಸಚಿವರಿಗೆ ಪತ್ರ ಬರೆಯುವುದಾಗಿ ಜೆಡಿಎಸ್ ಎಂಎಲ್‌ಸಿ ಇಂಚರ ಗೋವಿಂದರಾಜು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನ ಜಿಲ್ಲಾಡಳಿತ ಅರ್ಥ ಮಾಡಿಕೊಂಡು ಎಪಿಎಂಸಿಗೆ ಭೇಟಿ ಕೊಟ್ಟು ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕು. ಕಳೆದ ನಾಲ್ಕೈದು ದಿನಗಳಿಂದ ರೈತರು ಬೆಳೆದ ತರಕಾರಿಗಳು-ಹೂ ಮಾರುಕಟ್ಟೆಯಲ್ಲಿಯೇ ಕೊಳೆಯುತ್ತಿದ್ದರೂ ಜಿಲ್ಲಾಡಳಿತ ಅ ಕಡೆ ಹೋಗಿಲ್ಲ ಎಂದು ದೂರಿದರು.
ಸಂಸದ ಎಸ್. ಮುನಿಸ್ವಾಮಿ ಅವರು ಕೂಡ ಈ ಬಗ್ಗೆ ಗಮನ ಹರಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ರೈತರ ನೆರವಿಗೆ ಧಾವಿಸಬೇಕು. ಈ ಬಗ್ಗೆ ಸಂಸದರು, ಮುಖ್ಯಮಂತ್ರಿ, ಕೃಷಿ ಮಂತ್ರಿ ಅವರೊಂದಿಗೆ ಚರ್ಚಿಸಿ ರೈತರಿಗೆ ಧೈರ್ಯ ತುಂಬಿಸುವ ಕೆಲಸ ಮಾಡಬೇಕು.
ಜಿಲ್ಲಾಧಿಕಾರಿ ಮತ್ತು ಸಂಸದರು ಕೋಲಾರ ಜಿಲ್ಲೆಯ ಸಮಸ್ಯೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಇಲ್ಲಿನ ವಾಸ್ತುವಾಂಶವನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಿ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕೆಂದು ಕೋರಿದರು.
ನನಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲವು ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು-ರೈತರಿಗೆ ಆಗುತ್ತಿರುವ ಸಮಸ್ಯೆಯನ್ನ ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಹೊರಗಡೆ ಬಂದು ಅವರ ಪರವಾಗಿ ಧ್ವನಿ ಎತ್ತಲಿಕ್ಕೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ, ಕೃಷಿ ಮಂತ್ರಿಗೆ ಪತ್ರ ಬರೆದು ಜನತಾಕರ್ಫ್ಯೂನಿಂದಾಗಿ ಇಡೀ ರೈತ ಸಮುದಾಯ ಸಂಕಷ್ಠಕ್ಕೆ ಈಡಾಗಿದ್ದು ಅವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸುವುದಾಗಿ ಹೇಳಿದರು.
ಕೋಲಾರ ಎಪಿಎಂಸಿಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಲ್ಲದೆ ರೈತರು ಬೆಳೆದು ತಂದಿರುವ ಹೂ, ಟೊಮೆಟೋ, ಆಲೂಗಡ್ಡೆ, ಬೀನ್ಸ್, ನೌಕೋಲು, ಹೂಕೋಸು, ಎಲೆ ಕೋಸು, ಕ್ಯಾರೆಟ್, ಕ್ಯಾಪ್ಸಿಕಾಂ ಮುಂತಾದ ತರಕಾರಿಗಳು ಹರಾಜಿಲ್ಲದೆ ಮೂಟೆಗಳಲ್ಲಿ ಕೊಳೆಯುತ್ತಿರುವುದನ್ನ ಮಾಧ್ಯಮಗಳಲ್ಲಿ ತೋರಿಸಿದ್ದಾರೆ.
ಏಷ್ಯದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎನಿಸಿಕೊಂಡಿರುವ ಕೋಲಾರ ಎಪಿಎಂಸಿಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಂದ ಸಾಕಷ್ಟು ವ್ಯಾಪಾರಸ್ಥರು ಆಗಮಿಸಿ ತರಕಾರಿ ಗಳನ್ನು ಖರೀದಿಸುತ್ತಾರೆ, ಕೊರೋನಾ ೨ನೇ ಅಲೆಯಿಂದಾಗಿ ಅಂತರಾಜ್ಯ ಗಡಿ ಹಾಗೂ ಜಿಲ್ಲಾ ಗಡಿಗಳಲ್ಲೂ ಕೆಲವು ಕಠಿಣ ನಿಭಂಧನೆಗಳನ್ನ ಹಾಕಿದ್ದಾರೆ. ಇದರಿಂದಾಗಿ ತರಕಾರಿಗಳನ್ನ ಖರೀದಿಮಾಡಲು ವ್ಯಾಪಾರಸ್ಥರು ಬರುತ್ತಿಲ್ಲ. ಇದರಿಂದಲೇ ತರಕಾರಿ ಹಾಗೂ ಹಣ್ಣುಗಳು ಕೇಳುವವರಿಲ್ಲದೆ ಮಾರುಕಟ್ಟೆಯಲ್ಲೇ ಕೊಳೆಯುತ್ತಿದೆ.
ರಾಜ್ಯ ಸರ್ಕಾರ ಈ ಕೂಡಲೇ ಜನತಾ ಕರ್ಫ್ಯೂವಿನಿಂದ ಎಪಿಎಂಸಿ ಮಾರುಕಟ್ಟೆಗಳಿಗೆ ರಿಯಾಯಿತಿ ಕೊಟ್ಟು ತರಕಾರಿಗಳನ್ನು ಬೇರೆ ಕಡೆಗೆ ಸಾಗಿಸಲು ಅವಕಾಶ ನೀಡಬೇಕು, ರಾಜ್ಯ ಸರ್ಕಾರದ ಪರವಾಗಿ ಪ್ರತಿನಿಧಿಯೊಬ್ಬರನ್ನ ಕೋಲಾರ ಜಿಲ್ಲೆಗೆ ಕಳುಹಿಸಿ ನಷ್ಟ ಅನುಭವಿಸಿರುವ ರೈತರೊಂದಿಗೆ ಚರ್ಚಿಸಿ ಅವರಿಗೆ ಬೆಂಬಲ ಬೆಲೆ ಕೊಡಬೇಕು, ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.