ಜನತಾ ಕರ್ಫ್ಯೂ:ಬಿಕೋ ಎನ್ನುತ್ತಿರುವ ರಸ್ತೆಗಳು

ಮರಿಯಮ್ಮನಹಳ್ಳಿ, ಏ.30: ಕೊರೋನಾ ಎರಡನೇ ಅಲೆಯು ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಜನತಾ ಕಫ್ರ್ಯೂನ ಎರಡನೇ ದಿನ ಮರಿಯಮ್ಮನಹಳ್ಳಿ ಪಟ್ಟಣದ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ತಬ್ದಗೊಂಡಿದ್ದವು ಅಲ್ಲದೇ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು.
ರಾಜ್ಯದಾದ್ಯಂತ ಲಾಕ್‍ಡೌನ್ ಎರಡನೇ ದಿನಕ್ಕೆ ಕಾಲಿರಿಸಿದ್ದು ಪಟ್ಟಣದ ಜನತೆ ಸ್ವಯಂಪ್ರೇರಿತರಾಗಿ ಲಾಕ್‍ಡೌನ್ ಆದಂತೆ ಯಾರೂ ರಸ್ತೆಯ ಕಡೆ ಸುಳಿಯದೆ ಇಡೀ ಪಟ್ಟಣ ಮೌನಕ್ಕೆ ಶರಣಾದಂತೆ ಭಾಸವಾಗುತ್ತಿತ್ತು.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತರಕಾರಿ ಕಿರಾಣಿ ಅಂಗಡಿಗಳು, ಹಾಲಿನ ಡೈರಿಗಳು, ಮೊಟ್ಟೆ ಅಂಗಡಿಗಳಿಗೆ ತೆರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ನಾಗರಿಕರು ದಿನನಿತ್ಯದ ಅವಶ್ಯಕ ಖರೀದಿಸಲು ಓಡಾಡಿದ್ದನ್ನು ಬಿಟ್ಟರೆ ಬೆಳಿಗ್ಗೆ ಹತ್ತು ಗಂಟೆಯ ನಂತರ ಪಟ್ಟಣದಾದ್ಯಂತ ಎಲ್ಲವೂ ಸ್ತಬ್ದಗೊಂಡಿದ್ದವು. ಔಷಧಿ ಅಂಗಡಿಗಳು, ಆಸ್ಪತ್ರೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು.
ಪಟ್ಟಣ ಠಾಣೆಯ ಪೊಲೀಸರು ಮುಖ್ಯ ರಸ್ತೆಗಳಲ್ಲಿ ಹಾಗೂ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸುವುದು, ವಾಹನಗಳನ್ನು ಜಪ್ತಿಮಾಡುವ ಕಾರ್ಯದಲ್ಲಿ ನಿರಂತರ ತೊಡಗಿಕೊಂಡಿದ್ದರು. ಜನರು ಗುಂಪು ಗುಂಪಾಗಿ ನಿಂತ ಕಡೆಗಳಲ್ಲಿ ಅವರಿಗೆ ತಿಳಿಹೇಳಿ ಕಳಿಸುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಸುಡುಬಿಸಿಲಿನ ತಾಪದಲ್ಲಿಯೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿಕೊಂಡಿದ್ದರು.