ಜನತಾ ಕಫ್ರ್ಯೂ 3 ನೇ ದಿನ ಅನಗತ್ಯ ಓಡಾಟ: ಬಿಸಿಲಲ್ಲಿ ಬರಿಗಾಲಲ್ಲಿ ನಿಲ್ಲಿಸಿ ಶಿಕ್ಷೆ

ಕಲಬುರಗಿ ಏ 30: ಜನತಾ ಕಫ್ರ್ಯೂ 3 ನೇ ದಿನಕ್ಕೆ ಕಾಲಿಟ್ಟಿದ್ದು, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಪಡ್ಡೆ ಹುಡುಗರಿಗೆ ಪೊಲೀಸರು ಚುರುಕು ಮುಟ್ಟಿಸುತ್ತಿದ್ದಾರೆ.
ನಗರದ ಜಗತ್ ವೃತ್ತದ ಬಳಿ ಉದ್ದೇಶವಿಲ್ಲದೇ ಅಡ್ಡಾಡಿಕೊಂಡಿದ್ದ ಯುವಕರನ್ನು ಪೊಲೀಸರು ಬಿಸಿಲಲ್ಲಿ ಬರಿಗಾಲಲ್ಲಿ ನಿಲ್ಲಿಸಿದರು. ತಮ್ಮ ಕಪಾಳಕ್ಕೆ ತಾವೇ ಹೊಡೆದುಕೊಳ್ಳುವ ಕಪಾಳಮೋಕ್ಷ ಶಿಕ್ಷೆ ನೀಡಿದರು.
ನಿಯಮ ಪಾಲಿಸುವದಕ್ಕೆ ನಿಮಗೇನು ತೊಂದರೆ? ಎಂದು ಪ್ರಶ್ನಿಸಿದ ಪೊಲೀಸರು ಇನ್ನೊಮ್ಮೆ ಸಿಕ್ಕು ಬಿದ್ದರೆ ಅವಶ್ಯ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಕಳಿಸಿದರು.
ಬೆಳಗಿನ 10 ಗಂಟೆಯ ನಂತರ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ವಿಚಾರಿಸಿದ ಪೊಲೀಸರು ಅಗತ್ಯ ಸೇವೆಗೆ ತೆರಳುತ್ತಿದ್ದವರ ಗುರುತು ಪತ್ರ ನೋಡಿ ಕಳುಹಿಸಿದರು.
ಚೌಕ ಪಿಐ ಎಸ್.ಆರ್ ನಾಯಕ್, ಪಿಎಸ್‍ಐ ವಾಹೀದ್ ಕೋತ್ವಾಲ್ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿದರು.
ಮರೆತ ಸಾಮಾಜಿಕ ಅಂತರ:
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ನಗರದ ತರಕಾರಿ ಮಾರುಕಟ್ಟೆಗಳಲ್ಲಿ ಜನ ಮಾಸ್ಕ್ ಧರಿಸದೇ , ಸಾಮಾಜಿಕ ಅಂತರ ಕಾಪಾಡದೇ ಇರುವದು ಕಂಡು ಬಂತು.