ಜನತಾ ಕಫ್ರ್ಯೂ 2 ನೇ ದಿನ ಅಗತ್ಯ,ಅನಗತ್ಯ ಸಂಚಾರ ಪತ್ತೆಗೆ ಪೊಲೀಸರು ಹೈರಾಣ

ಕಲಬುರಗಿ ಏ 29: ಜನತಾ ಕಫ್ರ್ಯೂ ಪ್ರಾರಂಭವಾದ 2 ನೇ ದಿನವಾದ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗಿನ ನಿಗದಿತ 10 ಗಂಟೆ ಮೀರಿದ ನಂತರವೂ ಜನಗಳ ಸಂಚಾರ ಕಂಡು ಬಂದಿತು.
ವೈದ್ಯಕೀಯ ಇಲಾಖೆ,ಖಾಸಗಿ ವೈದ್ಯರು ವೈದ್ಯ ಸಿಬ್ಬಂದಿ, ಕಂದಾಯ ಇಲಾಖೆ ನೌಕರರು , ವಿದ್ಯುನ್ಮಾನ,ಪತ್ರಿಕೋದ್ಯಮದ ನೌಕರರು,ಅಂಚೆ ಇಲಾಖೆ,ಬ್ಯಾಂಕ್ ಸೇರಿದಂತೆ ಹಲವು ಅಗತ್ಯ ಸೇವಾ ಕ್ಷೇತ್ರದವರಿಗೆ ಕಫ್ರ್ಯೂ ನಿಯಮಗಳು ಅನ್ವಯಿಸುವದಿಲ್ಲ.
ಆದರೆ ಈ ಸಲ ಜಿಲ್ಲಾಡಳಿತ ಕಫ್ರ್ಯೂ ಪಾಸ್ ನೀಡದೇ ಇರುವದು ಗೊಂದಲಕ್ಕೆ ಕಾರಣವಾಗಿದೆ.
ಯಾರು ಅಗತ್ಯ ಸೇವೆಗಳಿಗಾಗಿ ಹೊರಗೆ ಹೊರಟವರು, ಯಾರು ಅನಗತ್ಯವಾಗಿ ಓಡಾಡುತ್ತಿರುವರು ಎಂದು ತಿಳಿಯದೇ ಎಲ್ಲರನ್ನು ನಿಲ್ಲಿಸಿ ತಪಾಸಣೆಗೊಳಪಡಿಸುವದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಔಷಧಿ ಗುಳಿಗೆ ಖರೀದಿಗೆಂದು ಹೊರಬಂದವರು ,ಸ್ವಂತ ವಾಹನ ಸೌಲಭ್ಯವಿಲ್ಲದೇ ರಸ್ತೆಯಲ್ಲಿ ನಡೆಯುತ್ತ ಆಸ್ಪತ್ರೆಗೆ ತೆರಳುವವರು ಸಮಸ್ಯೆ ಎದುರಿಸಬೇಕಾಗಿದೆ.
ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದರು ಎಂಬ ಕಾರಣದಿಂದ ಹಲವರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿದರು. ಲಾಠಿ ಏಟಿನ ರುಚಿ ತೋರಿಸಿದರು.