ಜನತಾ ಕಫ್ರ್ಯೂ ಆರಂಭ:ರಸ್ತೆಗಳು ನಿರ್ಜನ

ಕಲಬುರಗಿ ಏ 28: ಜನತಾ ಕಫ್ರ್ಯೂ ಆರಂಭದ ಮೊದಲ ದಿನವಾದ ಇಂದು ನಗರದಲ್ಲಿ ಬೆಳಿಗ್ಗೆ 10 ರ ನಂತರ ಜನಜೀವನ ನಿಧಾನವಾಗಿ ಸ್ತಬ್ದವಾಗಿದೆ.ರಸ್ತೆಗಳು ನಿರ್ಜನವಾಗಿವೆ.
ಕಫ್ರ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ.
ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ತರಕಾರಿ,ಕಿರಾಣಿ ಸಾಮಾನು,ಹಾಲು ಇತ್ಯಾದಿ ಖರೀದಿಗೆ ಜನ ಮುಗಿಬಿದ್ದರು.
ಹೋದ ವರ್ಷದ ಲಾಕ್‍ಡೌನ್ ಸಂದರ್ಭದಲ್ಲಿ ಇದ್ದ ಹಾಗೆ,ಈ ಸಲವೂ ಅಗತ್ಯ ವಸ್ತುಗಳ ಅಂಗಡಿಗಳನ್ನಾದರೂ ದಿನವಿಡಿ ತೆರೆಯಲು ಅವಕಾಶ ನೀಡಬೇಕಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಕಫ್ರ್ಯೂ ನೆಪವಾಗಿಟ್ಟುಕೊಂಡು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಔಷಧ ಅಂಗಡಿ,ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಚಾಲು ಇದ್ದು ಗ್ರಾಹಕರ ಬೇಡಿಕೆ ಪೂರೈಸುತ್ತಿವೆ.