ಜನತಾಜಲಧಾರೆ ಕಾರ್ಯಕ್ರಮ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಹೆಚ್‍ಡಿಕೆ

ಮೈಸೂರು,ಮೇ.13:- ಜೆಡಿಎಸ್ ವತಿಯಿಂದ ಕಳೆದೊಂದು ತಿಂಗಳಿನಿಂದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇಂದು ನೆಲಮಂಗಲದಲ್ಲಿ ಜನತಾ ಜಲಧಾರೆಯ ಸಮಾರೋಪ ಸಮಾರಂಭ ನಡೆಯಲಿದೆ.
ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದರು.
ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಕಾರ್ಯ ಕರ್ತರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದರು. ಈ ವೇಳೆ ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಾಥ್ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಯಿ ಚಾಮುಂಡೇಶ್ವರಿಯ ದರ್ಶನದಿಂದ ಜನತಾಜಲಧಾರೆ ಕಾರ್ಯಕ್ರಮ ಯಶಸ್ವಿ ಆಗಲಿದೆ. ಬೆಂಗಳೂರಿನಲ್ಲಿ ಇಂದು ನಡೆಯುವ ಜನತಾ ಜಲಧಾರೆ ಯಶಸ್ವಿ ಆಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಜನತಾ ಜಲಧಾರೆ ವಾಹನದ ಮೂಲಕ ನಾಡಿನ ನೀರಾವರಿ ಯೋಜನೆ, ಪಕ್ಷದ ನೀರಾವರಿ ಯೋಜನೆಗಳ ಕನಸನ್ನು ರಾಜ್ಯಾದ್ಯಂತ ಜನತೆಗೆ ತಿಳಿಸಲಾಗಿದೆ. ಜಲಧಾರೆ ಆರಂಭವಾದ ದಿನದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ನಿರಂತರ ಮಳೆಯಾಗುತ್ತಿರುವುದು ಶುಭ ಸೂಚಕ ಎಂದು ತಿಳಿಸಿದರು.
ಇದೇ ವೇಳೆ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಪ್ರತಿಕ್ರಿಯಿಸಿ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ. ಈ ಕುರಿತು ಹೆಚ್ ಡಿ ದೇವೇಗೌಡರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈಗಾಗಲೇ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕೆಲಸ ಆರಂಭಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿಯೇ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕಳೆದ ತಿಂಗಳು ಚಾಲನೆಯನ್ನು ನೀಡಿದ್ದರು. ರಾಜ್ಯದ ಹಲವು ಜಿಲ್ಲೆಗಳ ಪುಣ್ಯ ತೀರ್ಥಗಳನ್ನು ಕೂಡ ಇದೇ ವೇಳೆ ಸಂಗ್ರಹಿಸಲಾಗಿತ್ತು.