ಜನಜೀವನ ಸುಗಮವಾಗಿರಲು ಅಧಿಕಾರಿಗಳ ಕರ್ತವ್ಯ ಅತೀ ಮಹತ್ವದ್ದು: ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ

ಬೀದರ ನ. 18: ಜನಜೀವನ ಸುಗಮವಾಗಿರಲು ಅಧಿಕಾರಿಗಳ ಕರ್ತವ್ಯ ಅತೀ ಮಹತ್ವದ್ದಾಗಿದೆ. ಆದ್ದರಿಂದ ಎಲ್ಲ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವೆಂಬರ್ 17ರಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರನಲ್ಲಿ ಅಧಿಕಾರಿಗಳ ಸಂಖ್ಯೆ ಸಮರ್ಪಕವಾಗಿದೆ. ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಿ ತಮ್ಮ ತಮ್ಮ ಹಂತದಲ್ಲಿನ ಕೆಲಸವನ್ನು ತಾವೇ ಸರಿಯಾಗಿ ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾವುಗಳು ಸಹಕಾರ ನೀಡಿ ಕೆಲಸ ಮಾಡಿದಲ್ಲಿ ತಮ್ಮ ಇಲಾಖೆಗಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಸಲಹೆ ಮಾಡಿದರು.
168.10 ಕೋಟಿ ರೂ. ಹಾನಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 2020ರ ಜನವರಿ 1ರಿಂದ 2020ರ ನವೆಂಬರ್ 11ರವರೆಗೆ 820.00 ಮಿಮೀ ವಾಡಿಕೆ ಮಳೆಗೆ ವಾಸ್ತವವಾಗಿ 1048.00 ಮಿ.ಮೀ ನಷ್ಟು ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಕ್ಷೇತ್ರದ 370982 ಹೆಕ್ಟೇರ್ ಪೈಕಿ 247209 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ಒಟ್ಟು 168.10 ಕೋಟಿ ರೂ. ನಷ್ಟು ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,13,135 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್. ಅವರು ಸಭೆಗೆ ಮಾಹಿತಿ ನೀಡಿದರು.
ಮನೆಗಳ ಹಾನಿ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಪಟ್ಟಣ ಪ್ರದೇಶದಲ್ಲಿ 52 ಮನೆಗಳಿಗೆ ತೀವ್ರ ಹಾನಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ 1674 ಹಾಗೂ ಪಟ್ಟಣ ಪ್ರದೇಶ¸ದಲ್ಲಿ 86 ಮನೆಗಳು ಭಾಗಶಃ ಹಾನಿಗೀಡಾಗಿವೆ. ಈ ಮಾಹಿತಿಯನ್ನು ಆರ್‍ಜಿಆರ್‍ಎಚ್‍ಸಿಎಲ್ ಪೋರ್ಟಲ್‍ನಲ್ಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಕಾಲಕ್ಕೆ ಸೌಕರ್ಯ ಒದಗಿಸಿ: 2020-21ನೇ ಸಾಲಿನಲ್ಲಿ ಒಟ್ಟು 34 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ, 11 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಈಗಾಗಲೇ 14 ರೈತರ ಕುಟುಂಬದವರಿಗೆ ಪರಿಹಾರ ವಿತರಿಸಲಾಗಿದ್ದು, ಈ ಕುಟುಂಬದವರಿಗೆ ವಿಶೇಷ ಆರೋಗ್ಯ ಯೋಜನೆ ಸೌಕರ್ಯ ಮತ್ತು ಪಿಂಚಣಿ ಸೌಕರ್ಯ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಆತ್ಮಹತ್ಯೆಯಿಂದ ನೊಂದ ಕುಟುಂಬದವರಿಗೆ ಸರ್ಕಾರ ನೀಡುವ ಎಲ್ಲ ಸೌಕರ್ಯಗಳು ಸಕಾಲಕ್ಕೆ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮೇವಿನ ಲಭ್ಯತೆ: ಜಿಲ್ಲೆಯಲ್ಲಿನ ಒಟ್ಟು ಶಾಲೆಗಳು ಮತ್ತು ವಸತಿ ಶಾಲೆಗಳು ಮತ್ತು ಅವುಗಳ ಸ್ಥಿತಿಗತಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಕಾರ್ಯದರ್ಶಿಗಳು, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಮತ್ತು ಹಾಸ್ಟೇಲ್ ಕೋಣೆಗಳ ದುರಸ್ತಿಗೆ ಒತ್ತು ಕೊಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಇನ್ನೂ 30 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದೆ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬೀದರ್, ತೋಟಗಾರಿಕೆಗೆ ಪೂರಕವಾದ ವಾತಾವರಣ ಇರುವ ಜಿಲ್ಲೆಯಾಗಿದೆ. ತೋಟಗಾರಿಕಾ ಬೆಳೆ ಪ್ರದೇಶವನ್ನು ವಿಸ್ತರಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ತೋಟಗಾರಿಕಾ ಇಲಾಖಾ ಉಪ ನಿರ್ದೇಶಕರಿಗೆ ಇದೆ ವೇಳೆ ಸೂಚಿಸಿದರು.
ವಾರದ ಗುಡುವು: ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ ಕಾರ್ಯವು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ತೀವ್ರ ರೀತಿಯಲ್ಲಿ ನಡೆಯಬೇಕು. ತಹಸೀಲ್ದಾರರು ಮತ್ತ ತಾಪಂ ಇಓಗಳು ಜಂಟಿಯಾಗಿ ಸೇರಿ ಈ ಕಾರ್ಯಕ್ಕೆ ಒತ್ತು ಕೊಡಬೇಕು. ಅವಶ್ಯವಿರುವ ಎಲ್ಲಾ ಕಡೆಗಳಲ್ಲಿ ಬಾಕಿ ಉಳಿದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸ್ಥಳ ಗುರುತಿಸುವ ಕಾರ್ಯವನ್ನು ವಾರದೊಳಗಡೆ ನಡೆಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಹಸೀಲ್ದಾರರು ಮತ್ತು ಇಓಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ನಾಗೇಶ ಡಿ.ಎಲ್., ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಾಟೀಲ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.