ಜನಜಾನುವರುಗಳಿಗೆ ಕುಡಿಯುವ ನೀರಿನ  ಕೊರತೆಯಾಗದಂತೆ ಕ್ರಮ ಕೈಗೊಳ್ಳಿ – ಶಾಸಕ ಡಾ. ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.7 :- ಕೂಡ್ಲಿಗಿ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಜನ -ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಮಧ್ಯಾಹ್ನ ನಡೆದ ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕುಡಿಯುವ ನೀರಿಗೆ ಯಾವುದೇ ಅನುದಾನದ ಕೊರತೆ ಇಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಖಾಸಗಿ ಬೋರ್ ವೆಲ್ ಗಳಿಂದ ನೀರು ಪಡೆದುಕೊಳ್ಳುವಂತೆ ಪಿಡಿಓ ಗಳಿಗೆ ತಿಳಿಸಿದ ಶಾಸಕರು ಮುಂಬರುವ ಚುನಾವಣೆ ನೆಪ ಹೇಳಿ ಸಮಸ್ಯೆ ಉದ್ಭವಿಸಿದಲ್ಲಿ ಮುಲಾಜಿಲ್ಲದೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುವೆ ಎಂದು ಖಡಕ್ ಆಗಿ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ಗ್ಯಾರಂಟಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಹುಪಯೋಗವಾಗಿದ್ದು ಗ್ಯಾರಂಟಿ ಯೋಜನೆ ತಂದಿರುವುದರಿಂದ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದು ವಿರೋಧ ಪಕ್ಷಗಳು ಬೊಬ್ಬೆ ಹಾಕುತಿದ್ದು ಅದಕ್ಕೆ ಉತ್ತರ ಎಂಬಂತೆ  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 553 ಸಾವಿರ ಕೋಟಿ ರೂ ಅನುದಾನ ತಂದಿದ್ದು ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡುತ್ತಿದ್ದೂ ಇನ್ನೂ ಕೆಲವು ಕಾಮಗಾರಿ ಪೂರ್ಣಗೊಂಡಿದ್ದು ಅವುಗಳ ಉದ್ಘಾಟನೆ ಸಹ ಇಂದೇ ನಡೆಯಲಿದೆ
ಎಂದು ಶಾಸಕರು ತಿಳಿಸಿದರು. ಶೀಘ್ರದಲ್ಲೇ ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ಜಾನುವಾರುಗಳಿಗೆ ಗೋಶಾಲೆ ತೆರೆಯಲಾಗುವುದು ನಂತರ ಪೂಜಾರಹಳ್ಳಿ ಮತ್ತು ಕೂಡ್ಲಿಗಿ ಸಮೀಪದ ಗುಂಡಿನಹೊಳೆಯಲ್ಲಿ ಗೋಶಾಲೆ ತೆರೆಯಲಾಗುವುದು ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಪ್ರಗತಿಯ ಮಾಹಿತಿಯನ್ನು ಅಧಿಕಾರಿಗಳಿಂದ  ಶಾಸಕರು ಪಡೆದುಕೊಂಡರು. ಈ ಸಂದರ್ಭದಲ್ಲಿ ಇಓ ವೈ ರವಿಕುಮಾರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

One attachment • Scanned by Gmail