ಜನಜಾಗೃತಿಗೆ ರಾಹುಲ್ ಪಾದಯಾತ್ರೆ

ರಾಯಚೂರು,ಸೆ.೧೨- ರಾಷ್ಟ್ರೀಯ ಕಾಂಗ್ರೆಸ್ ಯುವ ನಾಯಕ ಮತ್ತು ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ ಜೋಡೊ ಪಾದಯಾತ್ರೆ ಅಕ್ಟೋಬರ್ ೧೬ ರಿಂದ ಎರಡು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ನಡೆಯಲಿದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಹೇಳಿದರು.
ಭಾರತ ಜೋಡೋ ಐಕ್ಯತಾ ಯಾತ್ರೆಯ ಯಶಸ್ವಿಗೆ ಪೂರ್ವಭಾವಿ ಸಭೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ ಜೋಡೋ ಯಾತ್ರೆ ದೇಶದ ಮಹತ್ವದ ಯಾತ್ರೆಯಾಗಿದ್ದು, ಈ ಯಾತ್ರೆಯೂ ಅಕ್ಟೋಬರ್ ೨೨,೨೩ ಕ್ಕೆ ಜಿಲ್ಲೆಯನ್ನು ಪ್ರವೇಶಿಸಲಿದೆ. ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ೫೦ ಕಿ.ಮೀ. ಪಾದಯಾತ್ರೆಯನ್ನು ಮಾಡಲಿದ್ದಾರೆ. ರಾಜ್ಯದಲ್ಲಿ ೫೦೦ ಕಿ.ಮೀ. ಪಾದಯಾತ್ರೆಯನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೆ, ಕೊಪ್ಪಳ, ಕಲ್ಬುರ್ಗಿ, ಬೀದರ್, ರಾಯಚೂರಿನ ರೈತರು ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.
ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಕೋಮು ಸೌಹಾರ್ದತೆಯ ಪ್ರತೀಕವಾಗಿ, ಬೆಲೆ ಏರಿಕೆಯ ವಿರುದ್ಧ ಜನ ಜಾಗೃತಿ ಮೂಡಿಸಲು, ರೈತರಿಗೆ ಬೆಂಬಲಿತ ಬೆಲೆ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಗಾಗಿ ಕೈಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ಎಐಸಿಸಿ ಚುನಾವಣೆ ಅಕ್ಟೋಬರ್ ೧೬ ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಎಲ್ಲಾ ಮುಖಂಡರು ಸ್ಪರ್ಧಿಸಬಹುದಾಗಿದೆ. ನಾನು ಸ್ಪರ್ಧಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ ಎಂದು ಕಾಂಗ್ರೆಸ್ ಅವಧಿಯ ಹಗರಣಗಳು ಬಯಲಿಗೆಳೆಯುವ ಬಿಜೆಪಿ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಯಾವ ತನಿಖೆಗೂ ಸಿದ್ಧವೆಂದರು.
ಶಾಸಕ ಬಸವರಾಜ ದಡೇಸುಗೂರು ಅಡಿಯೋ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಬೇಕಿತ್ತು. ಆದರೆ ಸರ್ಕಾರ ಯಾವುದೇ ವಿಚಾರಣೆ ಮಾಡಿಲ್ಲ ಎಂದರು. ಲೋಕಯುಕ್ತ ಈ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೋಳ್ಳಬೇಕೇಂದು ಆಗ್ರಹಿಸಿದರು.
ಭಾರತ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಿದ್ಧತೆಗಾಗಿ ನಗರದಲ್ಲಿ ಹಾಕಲಾದ ಫ್ಲಕ್ಸ್‌ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಕೈಬಿಟ್ಟ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಭಾವಚಿತ್ರ ಫ್ಲಕ್ಸ್‌ನಲ್ಲಿ ಹಾಕದಿರುವ ಬಗ್ಗೆ ಯಾವುದೇ ವಿವಾದ ಬೇಡ. ನಾನು ನನ್ನ ಭಾವಚಿತ್ರವನ್ನೂ ಫ್ಲಕ್ಸ್‌ನಲ್ಲಿ ಹಾಕುವುದು ಬೇಡವೆಂದು ಹೇಳಿದ್ದೆ. ಫ್ಲಕ್ಸ್‌ಗಳಲ್ಲಿ ಭಾವಚಿತ್ರ ಹಾಕುವುದೆ ರಾಜಕೀಯವಲ್ಲವೆಂದು, ಸಿದ್ದರಾಮಯ್ಯ ಅವರ ಭಾವಚಿತ್ರ ವಿವಾದಕ್ಕೆ ಸ್ಪಷ್ಟೀಕರಣ ನೀಡಿದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಭಾವಚಿತ್ರವನ್ನೂ ಫ್ಲಕ್ಸ್‌ನಲ್ಲಿ ಹಾಕಲಾಗುತ್ತದೆಂದು ತಿಳಿಸಿದರು.