(ಸಂಜೆವಾಣಿ ಪ್ರತಿನಿಧಿಯಿಂದ)
ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ಪೀಕರ್ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಇದ್ದಾರೆ.
ಬೆಂಗಳೂರು, ಜು. ೩- ಮುಂದಿನ ೫ ವರ್ಷಗಳಲ್ಲಿ ಸಮ ಸಮಾಜ ನಿರ್ಮಾಣ, ಜನಕೇಂದ್ರೀತ ಆರ್ಥಿಕತೆ ವ್ಯವಸ್ಥೆ ಜಾರಿ, ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪದ ಜತೆಗೆ ಜನಪರ ಆಡಳಿತ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ, ರೈತರು, ಬಡವರ ಕಲ್ಯಾಣಕ್ಕಾಗಿ ಯೋಜನೆಗಳ ಜಾರಿ ಸೇರಿದಂತೆ ನುಡಿದಂತೆ ನಡೆಯುವ ಬದ್ಧತೆ ಮತ್ತು ಗುರಿಯೊಂದಿಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದೆ.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ನಾಡಿನ ಸಂತರು, ಸಮಾಜದ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕವಿಗಳು ಮುಂತಾದವರ ಮಾರ್ಗದರ್ಶನದಿಂದ ಪ್ರೇರಿತರಾಗಿ ಜನ ಕೇಂದ್ರೀಕೃತವಾದ ಆರ್ಥಿಕತೆಯನ್ನು, ಜನಕೇಂದ್ರೀತೃಕವಾದ ಸಾಂಸ್ಕೃತಿಕತೆಯನ್ನು ಮತ್ತು ಸಮಸ್ತ ಕೇಂದ್ರೀಕೃತವಾದ ಅಭಿವೃದ್ದಿ ಮಾದರಿಗಳನ್ನು ರೂಪಿಸಲು ಸರ್ಕಾರ ಉದ್ದೇಶಿಸಿದೆ. ಆ ಮೂಲಕ ದೇಶಕ್ಕೆ ಕರ್ನಾಟಕದ ಮಾದರಿಗಳನ್ನು ನಿರ್ಮಿಸಿ ಸಾಬೀತು ಮಾಡಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಈ ಮಹಾ ಅಭಿಯಾನಕ್ಕೆ ಎಲ್ಲರ ಸಹಕಾರ, ಸಲಹೆ ಅಗತ್ಯ. ಎಲ್ಲರೂ ಜತೆಗೂಡಿ ಸಮೃದ್ಧವೂ, ಸೌಹಾರ್ದಪೂರಕವೂ ಆದ ನಾಡನ್ನು ನಿರ್ಮಿಸೋಣ ಎಂದು ಕರೆ ನೀಡಿದರು.ಇಂದು ಜಗತ್ತಿನ ಅನೇಕ ದೇಶಗಳು ಜನಕೇಂದ್ರೀಕೃತ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿವೆ. ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯು ಪ್ರಬಲಗೊಳ್ಳುತ್ತಿದೆ. ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತುಸುವಾದರೂ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಮಾನವೀಯತೆ ಮತ್ತು ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಕಾಸವಾಗುತ್ತಿರುವ ಈ ಆರ್ಥಿಕ ನೀತಿಯು ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತಗೊಳ್ಳುವುದನ್ನು ಇಲ್ಲವಾಗಿಸುತ್ತದೆ. ಒಂದರ್ಥದಲ್ಲಿ ಇದು ಬೆಲೆ ಏರಿಕೆ ಹಾಗೂ ಕಡಿಮೆ ಆದಾಯದಿಂದ ತತ್ತರಿಸಿರುವ ಜನತೆಗೆ ಘನತೆಯನ್ನು ತಂದು ಕೊಡುತ್ತದೆ. ಈ ಘನ ಸರ್ಕಾರ ಯೋಜನೆಗಳ ಮೂಲಕ ಹೊಸ ಅಭಿವೃದ್ಧಿ ಮಾದರಿಯನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ ಎಂದರು.ಜನರಿಗೆ ಅವರಿಂದಲೇ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಮೂಲಕ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅನುಚ್ಛೇಧಗಳ ಪರೋಕ್ಷ ಅನುಷ್ಠಾನವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.ಜನಕೇಂದ್ರೀಕೃತವಾದ ಆರ್ಥಿಕತೆಯನ್ನು ರೂಪಿಸಲು ಈ ಸರ್ಕಾರ ಬಯಸಿದೆ. ಇದು ಸಾಧ್ಯವಾಗಬೇಕಾದರೆ ಕಡಿಮೆ ಜಾಗದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಠಿಸುವ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶ ಈಡೇರಬೇಕಿದೆ. ನಾವು ನಮ್ಮ ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಕ್ಕಪಕ್ಕದ ರಾಜ್ಯಗಳಿಗಷ್ಟೇ ಅಲ್ಲದೆ ದೂರದ ಚೀನಾ ಮುಂತಾದ ದೇಶಗಳೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಸರ್ಕಾರ ಮನಗಂಡಿದೆ. ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕಿದೆ ಎಂದರು.
ಜನಪರ ಆಡಳಿತ
ಜನಪರ ಆಡಳಿತದ ಅನನ್ಯ ಮತ್ತು ಅನುಕರಣೀಯವಾದ ಹಲವು ಮಾದರಿಗಳನ್ನು ಆವಿಷ್ಕರಿಸಿದ ಖ್ಯಾತಿ ಕರ್ನಾಟಕದ್ದು. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನಾದೇಶದ ಸಂದೇಶವೂ ಅದುವೇ ಆಗಿದೆ. ಜನಪರ ಆಡಳಿತದ ನೀತಿಗಳನ್ನು ಆವಿಷ್ಕರಿಸುವ ಮತ್ತು ಅಳವಡಿಸಿಕೊಳ್ಳುವ ಮಹಾಪರಂಪರೆಯ ವಾರಸುದಾರರಾಗಲು ಈ ಸರ್ಕಾರ ಪಣ ತೊಟ್ಟಿದೆ. ಜನಪರ ಆಡಳಿತ ಈ ಸರ್ಕಾರದ ಬದ್ಧತೆ ಎಂದು ಅವರು ಹೇಳಿದರು.ಜಾತಿ ಧರ್ಮಗಳ ಭೇದ ಎಣಿಸದೆ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕವಾಗಬೇಕು ಎಂದು ರಾಜ್ಯದ ಜನ ಬಯಸಿದ್ದಾರೆ. ಅದಕ್ಕೆ ಪೂರಕವಾದ ಕರ್ನಾಟಕವನ್ನು ಆಡಳಿತವನ್ನು ನೀಡುತ್ತೇವೆ. ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಈ ಸರ್ಕಾರ ಮಾಡಲಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು.
ಹೊಸ ಸರ್ಕಾರವನ್ನು ಆರಿಸುವಾಗ ಜನರ ನಿರೀಕ್ಷೆಗಳು ಹೊಸದಾಗಿರುತ್ತವೆ. ಹಳೆಯದಕ್ಕಿಂತ ಭಿನ್ನವಾದ ಮತ್ತು ತಮ್ಮ ಆಶೋತ್ತರಗಳನ್ನು ಪ್ರತಿಬಿಂಬಿಸುವ ಆಡಳಿತವನ್ನು ಜನ ನಿರೀಕ್ಷಿಸುತ್ತಾರೆ. ಅದರಂತೆ ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ ಬಸವಣ್ಣನವರ ದೀಕ್ಷಾ ವಾಕ್ಯವಾದ ನುಡಿದಂತೆ ನಡೆಯಬೇಕು ಎಂಬುದನ್ನು ಸರ್ಕಾರ ಕರ್ತವ್ಯ ಗೀತೆಯಾಗಿ ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಹಸಿವು ಮುಕ್ತ ನಾಡು
ಅನ್ನವನ್ನು ನೀಡುವುದು ನನ್ನಿಯನ್ನು ನುಡಿಯುವುದು, ತನ್ನಂತೆ ಪರರ ಬಗೆದೆಡೆ ಕೈಲಾಸ ಬಿನ್ನಾಣ ಹೊಕ್ಕು ಎಂದು ಕವಿ ಸರ್ವಜ್ಞ ಹೇಳಿದ್ದಾರೆ. ಅದರಂತೆ ಈ ಸರ್ಕಾರ ೫ ಗ್ಯಾರೆಂಟಿಗಳ ಮೂಲಕ ಸಾಧಿಸಲು ಹೊರಟಿರುವುದು ಇದನ್ನೆ. ಇದರ ಅನುಷ್ಠಾನವನ್ನು ಶ್ರದ್ಧೆ ಮತ್ತು ನೈಜವಾದ ಕಾಳಜಿಯಿಂದ ಮಾಡಿದ್ದೇವೆ. ಆಹಾರ ಭದ್ರತಾ ಯೋಜನೆಯಡಿ ೧೦ ಕೆ.ಜಿ.ಯನ್ನು ಉಚಿತವಾಗಿ ನೀಡುವ ಮೂಲಕ ಹಸಿವು ಮುಕ್ತ ನಾಡನ್ನು ಕಟ್ಟಲು ನಾವು ಬದ್ದರಾಗಿದ್ದೇವೆ ಎಂದು ರಾಜ್ಯಪಾಲರು ಹೇಳಿದ್ದಾರೆ.ರಾಜ್ಯಪಾಲರು ತಮ್ಮ ಭಾಷಣದಲ್ಲಿ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಿರುವುದನ್ನು ಪ್ರಸ್ತಾಪಿಸಿದ್ದು, ಅಕ್ಕಿ ಸಿಗುವವರೆಗೂ ನಗದು ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಅನ್ನ ನೀಡದ ಸರ್ಕಾರ ಜನದ್ರೋಹಿ
ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ ಎಂದಿರುವ ರಾಜ್ಯಪಾಲರು, ಬಡವರು,ಕ ದುಡಿಯುವ ವರ್ಗದ ಜನರು, ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವನ್ನು ತಣಿಸಲು ಈ ಹಿಂದೆ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ಯಾಂಟೀನ್‌ಗಳನ್ನು ಇನ್ನು ಸಮರ್ಥವಾಗಿ ಸರ್ಕಾರ ನಡೆಸುತ್ತದೆ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‌ಗಳ ಮೂಲಕ ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ ಎಂದರು.ಯುವ ನಿಧಿ ಯೋಜನೆ, ಯುವ ಲಕ್ಷ್ಮಿ ಯೋಜನೆಯ ಬಗ್ಗೆಯೂ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿ, ಈ ಮೂಲಕ ಯುವಕರು ಮತ್ತು ಮಹಿಳಾ ಸಬಲೀಕರಣದ ಜತೆಗೆ ಮಹಿಳೆಯರಿಗೆ ಆರ್ಥಿಕ ಚೈತನ್ಯ ಲಭಿಸಲಿದೆ ಎಂದು ಹೇಳಿದ್ದಾರೆ.ರೈತರ ಕಲ್ಯಾಣಕ್ಕೂ ಸರ್ಕಾರ ಒತ್ತು ನೀಡಿದೆ. ಅನ್ನದಾತರಾಗಿರುವ ರೈತರಿಗೆ ಅಗತ್ಯ ಇರುವ ರಸಗೊಬ್ಬರ, ಬಿತ್ತನೆ ಬೀಜ, ಔಷಧಗಳನ್ನು ಸಮರ್ಪಕವಾಗಿ ಪೂರೈಸಿ ಅವರ ಬದುಕು ಸುಧಾರಿಸಲು ಅದಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡುವುದಾಗಿ ಅವರು ಹೇಳಿದರು.ಪರಿಶಿಷ್ಟ ಜಾತಿ, ಪಂಗಡದ ಜನರ ಭೂಮಿಗಳ ರಕ್ಷಣೆಗೆ ಸಂಬಂಧಿಸಿದಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ದಮನಿತ ಸಮುದಾಯಗಳ ಯುವಜನರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದ್ದೇವೆ. ಅತ್ಯುತ್ತಮವಾದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಬದ್ಧವಾಗಿದ್ದು, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಾಮರಸ್ಯದ ವಾತಾವರಣದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸರ್ಕಾರ ಗಮನ ನೀಡಿದೆ ಎಂದರು.ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯ ರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ಶಿಕ್ಷಣದಲ್ಲಿ ಕರುಣೆ, ಬುದ್ಧಿ ಮತ್ತು ಕೌಶಲ್ಯಗಳು ಏಕೀ ಬಯಸಿದ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗಿದೆ. ಕೈಕಾಲುಗಳ ಮೂಲಕ ಕೌಶಲ್ಯವನ್ನು, ಮಿಡಿಯುವ ಹೃದಯದ ಮೂಲಕ ಬುದ್ದಿ, ಕರುಣೆಗಳು ಸೇರಿದ ಸಮಗ್ರ ಶಿಕ್ಷಣವನ್ನು ರೂಪಿಸಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ರಚಿಸಲಿದೆ. ನಿರ್ಭೀತ, ಮುಕ್ತ, ಉದಾರ, ವೈಚಾರಿಕ ಹಾಗೂ ವೈಜ್ಞಾನಿಕವಾದ ತಜ್ಞರು, ಚಿಂತನಶೀಲ ಜನರು, ಬುದ್ಧಿವಂತರು, ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯವನ್ನು ಸಮಾನ ದೃಷ್ಠಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಅವರು ಹೇಳಿದರು.
ಭ್ರಷ್ಟಾಚಾರಕ್ಕೆ ಕಡಿವಾಣ
ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರವು ಸಾಂಸ್ಥೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಿ ಭ್ರಷ್ಟಾಚಾರವನ್ನು ಮೂಲೋಚ್ಛಾಟನೆ ಮಾಡಲು ಎಲ್ಲರ ಸಹಕಾರವನ್ನು ರಾಜ್ಯಪಾಲರು ಕೋರಿದರು.