ಜಡ್ಜ್ ಮುಂದೆ ಹೇಳಿಕೆ ಬಳಿಕ ಸಿಡಿ ಯುವತಿಗೆ ಎಸ್ ಐಟಿ ವಿಚಾರಣೆ

ಬೆಂಗಳೂರು,ಮಾ.30-ಮಾಜಿ ಸಚಿವ ರಮೇಶ್ ಜಾರಿ ರಾಸಲೀಲೆ ಸಿಡಿ ಪ್ರಕರಣದ ಸಂಬಂಧ ನ್ಯಾಯಾಲಯದ ಎದುರು ಹಾಜರಾಗಿ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಿರುವ ಸಿಡಿ ಯುವತಿಯು ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಗೂ ಎಸ್‌ಐಟಿ ಅಧಿಕಾರಿಗಳು, ಜಂಟಿಯಾಗಿ ಯುವತಿಯನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿದ್ದಾರೆ.
ನ್ಯಾಯಾಲಯದ ಸೂಚನೆಯಂತೆ ಯುವತಿ ಕಾರಿನಲ್ಲಿ ಆಡುಗೋಡಿಗೆ ಬಂದಿದ್ದಾರೆ. ವಿಶೇಷ ವಿಚಾರಣಾ ಕೊಠಡಿ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


ವಿಚಾರಣೆ ಬಳಿಕ ಯುವತಿಯನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಸಿಡಿಪ್ರಕರಣದ ಸಂತ್ರಸ್ತೆಯಾದ ಯುವತಿ, ವಸಂತನಗರದ ಗುರುನಾನಕ್‌ ಭವನ ಬಳಿಯ ನ್ಯಾಯಾಲಯಕ್ಕೆ‌ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಭದ್ರತೆ ಕಾರಣಕ್ಕಾಗಿ‌ ಮೊದಲೇ ಯೋಚಿಸಿ, ಮಾಹಿತಿಯನ್ನು ಗೌಪ್ಯವಾಗಿರಿಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬದಲು ವಸಂತನಗರದ ನ್ಯಾಯಾಲಯಕ್ಕೆ ಯುವತಿಯನ್ನು ಕರೆಸಲಾಗಿತ್ತು
ಕೊರೊನಾ ಸೋಂಕು ಹರಡುವಿಕೆ‌ ಹಿನ್ನೆಲೆಯಲ್ಲಿ ಗುರುನಾನಕ್ ಭವನ ಬಳಿ ವಿಶೇಷ ನ್ಯಾಯಾಲಯ ತೆರೆಯಲಾಗಿತ್ತು. ಅಲ್ಲಿಯೇ ಯುವತಿಯಿಂದ ಮಹಿಳಾ ನ್ಯಾಯಧೀಶರು ಸುಮಾರು ಎರಡೂವರೆ ಗಂಟೆಗಳ‌ ಕಾಲ‌ ಹೇಳಿಕೆ ಪಡೆದರು.
ಇದೊಂದು ಗಂಭೀರ‌ ಪ್ರಕರಣವೆಂದು ಪರಿಗಣಿಸಿದ ನ್ಯಾಯಾಧೀಶರು, ಸ್ವತ ಕಾರಿನಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ವಸಂತನಗರದ ನ್ಯಾಯಾಲಯಕ್ಕೆ ಹೋಗಿದ್ದಾರೆ.
ನ್ಯಾಯಾಧೀಶರು ಹೋಗುವ ಮುನ್ನವೇ ಯುವತಿ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಯುವತಿಯ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರಪಡಿಸಲಾಗಿದೆ.ಮ್ಯಾಜಿಸ್ಟ್ರೇಟ್ ಎದರು ಹೇಳಿಕೆ ದಾಖಲು ಪ್ರಕ್ರಿಯೆ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಯುವತಿಯನ್ನು ವಶಕ್ಕೆ ಪಡೆದು ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ಕೈಗೊಂಡಿದ್ದಾರೆ.
ವಿಚಾರಣೆ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಕೆಗೆ ಅನಾರೋಗ್ಯವಿರುವುದಾಗಿ ವಕೀಲರು ತಿಳಿಸಿರುವ ಕಾರಣ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗುತ್ತಿದೆ.
ಇದೇ ವೇಳೆ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೂ ಸಿಡಿ ಯುವತಿಯನ್ನು ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.