
ಚಿಂಚೋಳಿ,ಜು.27-ತಾಲ್ಲೂಕಿನ ಜಟ್ಟೂರು ಗ್ರಾಮದಲ್ಲಿ ಹಳ್ಳದಲ್ಲಿ ತೆಲಂಗಾಣ ಮೂಲದ ಇಬ್ಬರ ಶವ ಪತ್ತೆಯಾಗಿವೆ.
ಮೃತರನ್ನು ತೆಲಂಗಾಣ ರಾಜ್ಯದ ಮಂತಟ್ಟಿ ಗ್ರಾಮದ ಬುಗ್ಗಪ್ಪ ನರಸಪ್ಪ (60) ಮತ್ತು ಅವರ ಪತ್ನಿ ಯಾದಮ್ಮ ಬುಗ್ಗಪ್ಪ (55) ಎಂದು ಗುರುತಿಸಲಾಗಿದೆ.
ತರಕಾರಿ ವ್ಯಾಪಾರ ಮಾಡುತ್ತಿದ್ದ ಬುಗ್ಗಪ್ಪ ಮತ್ತು ಅವರ ಪತ್ನಿ ಯಾದಮ್ಮ ಅವರು ಹಳ್ಳ ದಾಟಲು ಹೋದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಂದು ಬೆಳಿಗ್ಗೆ ಜಟ್ಟೂರು ಹಳ್ಳದಲ್ಲಿ ಶವ ತೇಲುತ್ತ ಬರುತ್ತಿದ್ದನ್ನು ಸ್ಥಳಿಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುದ್ದಿ ತಿಳಿದು ಸುಲೇಪೇಟ್ ಪೊಲೀಸ್ ಠಾಣೆ ಪಿ.ಎಸ್.ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ಈಜುಗಾರರ ಸಹಾಯದಿಂದ ಎರಡು ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದರು.
ಬೆಳಿಗ್ಗೆಯಿಂದಲೇ ಶವ ಹೊರತೆಗೆಯುವ ಕಾರ್ಯಾಚರಣೆ ನಡೆಸಿ ಮಧ್ಯಾಹ್ನದ ವೇಳೆಗೆ ಎರಡು ಶವಗಳನ್ನು ಹೊರ ತೆಗೆದು ಮೃತರ ಗುರುತು ಪತ್ತೆ ಹಚ್ಚಲಾಗಿದೆ.
ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.