ಜಗ್ಗಲ್ಲ, ಬಗ್ಗಲ್ಲ ಈಶ್ವರಪ್ಪ ವಾಗ್ದಾಳಿ

ಮೈಸೂರು, ಏ. ೨- ನಾನು ಯಾವುದಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಹೇಳಿರುವ ಸಚಿವ ಈಶ್ವರಪ್ಪರವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಗಮನಕ್ಕೆ ಬಾರದೆ ಪಂಚಾಯಿತ್ ರಾಜ್ ಇಲಾಖೆಯಲ್ಲಿ ಹಣ ಬಿಡುಗಡೆ ಮಾಡಿರುವ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾರವರ ಗಮನಕ್ಕೆ ತಂದಿದ್ದೆ, ವಿನಃ ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ನಾನು ರೆಬಲ್ ಅಲ್ಲ, ಲಾಯಲ್. ಜೀವನದಲ್ಲಿ ಎಂದೂ ನಾನು ರೆಬಲ್ ಆಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿ, ನನ್ನ ಗಮನಕ್ಕೆ ತರದೆ ಅನುದಾನ ಬಿಡುಗಡೆ ಮಾಡಿರುವುದಕ್ಕಷ್ಟೇ ನನ್ನ ಆಕ್ಷೇಪ ಎಂದು ಹೇಳಿದರು.
ಅನುದಾನ ಹಂಚಿಕೆ ಅಧಿಕಾರ ನನ್ನದು. ನಿಯಮಮಾವಳಿಗಳ ಅನುಸಾರವೇ ಅನುದಾನ ಹಂಚಿಕೆ ಆಗಬೇಕು ಎಂಬುದು ನನ್ನ ಬಯಕೆ. ನಾನು ಇಲಾಖೆಯ ಫೋಸ್ಟ್ ಮ್ಯಾನ್ ಆಗಲು ಬಯಸುವುದಿಲ್ಲ. ಯಾವುದಕ್ಕೂ ಜಗ್ಗುವುದು ಇಲ್ಲ, ಬಗ್ಗುವುದಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವಾಗಲಿ ಯಾರ ವಿರುದ್ಧವಾಗಲಿ ನಾನು ದೂರು ನೀಡಿಲ್ಲ. ಇಲಾಖೆಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ ಅಷ್ಟೇ ಎಂದರು.
ಶಾಸಕರಿಗೆ ಅನುದಾನ ನೀಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನಿಯಮಾನುಸಾರ ಅನುದಾನ ಬಿಡುಗಡೆಯಾಗಬೇಕು ಎಂಬುದು ನನ್ನ ಅಪೇಕ್ಷೆ. ಮುಖ್ಯಮಂತ್ರಿಗಳು ನನ್ನ ಗಮನಕ್ಕೆ ತಾರದೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವಾಗಲಿ ಯಾರ ವಿರುದ್ಧವಾಗಲಿ ನಾನು ದೂರು ನೀಡಿಲ್ಲ. ವರಿಷ್ಠರಿಗೆ ಕಳುಹಿಸಿರುವ ಪತ್ರದಲ್ಲಿ ಆಡಳಿತದಲ್ಲಿ ಏನು ನಡೆದಿದೆ ಎಂಬುದನ್ನು ಮನವರಿಕೆ ಮಾಡಿ, ವ್ಯತ್ಯಾಸಗಳನ್ನು ಸರಿಪಡಿಸುವಂತೆ ಹೇಳಿದ್ದೇನೆ. ಇದರಲ್ಲಿ ತಪ್ಪೇನಲ್ಲ ಎಂದರು.
ಮುಖ್ಯಮಂತ್ರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳನ್ನು ನಾನು ಕೇಳಿದಾಗ ತಪ್ಪಾಗಿದೆ ಎಂದು ಅವರು ಹೇಳಿದ್ದರು. ಹಾಗಾಗಿ ಈ ಅನುದಾನವನ್ನು ರದ್ದುಗೊಳಿಸಲಾಗಿದೆ. ಯಾವುದೇ ಅನುದಾನ ನಿಯಮಾನುಸಾರ ನೀಡಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ನೀಡಿಕೆ ಸಂಬಂಧ ನಾನು ವರಿಷ್ಠರಿಗೆ ಬರೆದಿರುವ ಪತ್ರ ನ್ಯಾಯಸಮ್ಮತವಾಗಿದೆ ಎಂದು ಹಲವು ಶಾಸಕರು, ಪಕ್ಷದ ಮುಖಂಡರುಗಳು ನನಗೆ ಹೇಳಿದ್ದಾರೆ. ಸಹಿ ಸಂಗ್ರಹ ಮಾಡುವುದಾಗಿಯೂ ಇವರುಗಳು ಹೇಳಿದ್ದರು. ನಾನೇ ಬೇಡ ಎಂದಿದ್ದೇನೆ. ಯಾರ ವಿರುದ್ಧವೂ ಸಹಿ ಸಂಗ್ರಹ ಮಾಡುವುದು ತಪ್ಪು ಇದಕ್ಕೆ ನನ್ನ ಸಮ್ಮತಿಯಿಲ್ಲ ಎಂದು ಮುಖ್ಯಮಂತ್ರಿಗಳ ಆಡಳಿತಕ್ಕೆ ಸಂಬಂಧಿಸಿದಂತೆ ವರಿಷ್ಠರಿಗೆ ಪತ್ರ ಬರೆದ ನಂತರ ನಾಲ್ವರು ಸಚಿವರು, ನಾಲ್ವರು ಶಾಸಕರು ನನ್ನ ರಾಜೀನಾಮೆ, ಖಾತೆ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಯಾವುದಕ್ಕೂ ಜಗ್ಗುವವನು ನಾನಲ್ಲ ಎಂದು ಅವರು ಗುಡುಗಿದರು.
ಮುಖ್ಯಮಂತ್ರಿ ಅವರು ನೇರವಾಗಿ ಅನುದಾನ ಬಿಡುಗಡೆ ಮಾಡಿ, ಬರೆದಿರುವ ಪತ್ರದ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನನ್ನ ಜತೆ ಮಾತನಾಡಿದ್ದಾರೆ. ನಾನು ಬರೆದಿರುವ ಪತ್ರ ನ್ಯಾಯ ಸಮ್ಮತವಾಗಿದೆ ಎಂದು ಈಶ್ವರಪ್ಪ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ನಾನು ನನ್ನ ಪಕ್ಷ ನಿಷ್ಠೆ ಯಾವತ್ತೂ ಬಿಜೆಪಿಗೆ. ನಾನು ಯಾವುದೇ ಪಕ್ಷಕ್ಕೆ ಹೋಗಿಲ್ಲ. ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಮತ್ತೆ ಬಿಜೆಪಿಗೆ ಬಂದಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ಕೆಲಸ ಮಾಡುತ್ತಿದ್ದಾಗ ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರು. ನಾನು ಆಗ ಕೆಜೆಪಿ ಕಟ್ಟದಂತೆ ಸಲಹೆ ಮಾಡಿದ್ದೆ ಆಗ ಯಡಿಯೂರಪ್ಪನವರು ಮತ್ತೆ ಈ ಜನ್ಮದಲ್ಲಿ ಬಿಜೆಪಿಗೆ ವಾಪಸ್ ಬರಲ್ಲ ಎಂದಿದ್ದರು. ಆಗ ನಾನು ನನ್ನದೇ ಭಾಷೆಯಲ್ಲಿ ತಿರುಗೇಟು ಕೊಟ್ಟಿದೆ. ಪಕ್ಷ ನನ್ನ ತಾಯಿಗೆ ಸಮಾನ ಎಂದು ಈಶ್ವರಪ್ಪ ಹೇಳಿದರು.
ಯಡಿಯೂರಪ್ಪ ಮತ್ತು ನನ್ನ ಸಂಘರ್ಷ ಹೊಸದೇನಲ್ಲ. ಇದರಲ್ಲಿ ವೈಯುಕ್ತಿಕವಾದದ್ದು ಏನೂ ಇಲ್ಲ. ಆಡಳಿತ ವಿಚಾರವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳಿವೆ ಎಂದು ಅವರು ಹೇಳಿದರು.
ಉಪಚುನಾವಣೆ ಮುಗಿದ ನಂತರ ಎಲ್ಲವನ್ನು ಸರಿಪಡಿಸುವುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ನಮಗೆ ತಿಳಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.