ಜಗಳೂರು: ವಿದ್ಯುತ್ ಪೂರೈಕೆ ಮಾಡದ ಬೆಸ್ಕಾಂ ಎಇಇಗೆ ರೈತರ ತರಾಟೆ!

ಜಗಳೂರು.ಜ.೧೭: ರೈತರಿಗೆ ತ್ರೀ ಫೇಸ್ ವಿದ್ಯುತ್ ನೀಡದ ಜಗಳೂರು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಮತ್ತು ವಿಭಾಗೀಯ ಅಧಿಕಾರಿಗಳ ವಿರುದ್ಧ ಪಲ್ಲಾಗಟ್ಟೆ, ಐನಹಳ್ಳಿ, ಗುಡ್ಡದನಿಂಗಣ್ಣನಹಳ್ಳಿ, ಮಿನಿಗರಹಳ್ಳಿ, ಕೊಡದಗುಡ್ಡ ಸೇರಿದಂತೆ ಸುತ್ತಮುತ್ತಲ ಗ್ರಾಮದ 500ಕ್ಕೂ ಹೆಚ್ಚು ರೈತರು ಸೋಮವಾರ ಶಾಖಾ ಕಚೇರಿಗೆ ಮುತ್ತಿಗೆಹಾಕಿ ಆಕೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ತೀವ್ರ ಮಳೆಗಾಲದಿಂದ ಈಗಾಲೇ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕಿದ್ದ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಆಕ್ರೋಶ ಭುಗಿಲೆದ್ದಿತ್ತು. ಮಳೆಯಿಂದ ಕೆರೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ಡ್ಯಾಂಗಳಲ್ಲೂ ನೀರಿನ ಸಮಸ್ಯೆಯಿಲ್ಲ. ಈ ಬಾರಿ ವಿಪರೀತ ಬಿಸಿಲಿನ ಝಳಕ್ಕೆ ಬಿತ್ತಿರುವ ಬೆಳೆಗಳೆಲ್ಲವೂ ಬತ್ತಿ ಹೋಗುತ್ತಿವೆ. ಸರಕಾರದ ನಿಯಮಾನುಸಾರ ಕನಿಷ್ಠ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ವೋಲ್ಟೇಜ್ ಸಮಸ್ಯೆಯಿಂದ ಮೋಟಾರ್‍ಗಳು ರನ್ ಆಗುತ್ತಿಲ್ಲ. ಕಳೆದ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪದೇ ಪದೇ ವಿದ್ಯುತ್ ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಡಿತಗೊಳಿಸಿದ ವಿದ್ಯುತ್ ಅವಧಿಯನ್ನು ಸೇರಿಸಿ ಪವರ್ ಕೊಡಿ ಎಂದು ಕೇಳಿದ ರೈತರಿಗೆ ಎಇಇ ಗಿರೀಶ್ ನಾಯ್ಕ್ ಅವಾಶ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‘ನನಗೆ ಸಂಬಳ ಕೊಡುವುದು ಸರಕಾರ ನೀವಲ್ಲ’ ಎಂದು ರೈತ ವಿರೋಧಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ರೈತರಾದ ನೀಲಕಂಠಪ್ಪ, ಜ್ಞಾನೇಶ್, ವೀರೇಶ್, ಮಲ್ಲಣ್ಣ ,ಮಲ್ಲಾಪುರ ವೀರೇಶ್, ಪ್ರದೀಪ್, ನಾಗಪ್ಪ ಸೇರಿದಂತೆ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.