ಜಗಳೂರು: ಬೀದಿ ವ್ಯಾಪಾರಿಗಳಿಗಾಗಿ ಸಾಲ ಯೋಜನೆ

ಸಂಜೆವಾಣಿ ವಾರ್ತೆ

ಜಗಳೂರು.ಜ.22:ಬೀದಿ ವ್ಯಾಪಾರಿಗಳ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಸಾಲ’ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು,  ಬೀದಿ ವ್ಯಾಪಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್. ಪ್ರಕಾಶ್ ಹೇಳಿದರು.ಪಟ್ಟಣದಲ್ಲಿ  ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ಭದ್ರತೆ ಇಲ್ಲದೆ  ಪ್ರತಿ ಬೀದಿ ವ್ಯಾಪಾರಿಗೆ ಎಲ್ಲಾ ಬ್ಯಾಂಕ್ ಗಳಲ್ಲಿ ವ್ಯಾಪಾರಕ್ಕಾಗಿ ತಲಾ ರೂ. 10 ಸಾವಿರ ಸಾಲ ನೀಡಲಾಗುತ್ತದೆ. ಅದನ್ನು ನಿಗದಿತ ಅವಧಿಯಲ್ಲಿ ಮರು ಪಾವತಿಸಿದಲ್ಲಿ  ಹಂತಹಂತವಾಗಿ  ರೂ. 50 ಸಾವಿರದವರೆಗೆ ಸಾಲ ನೀಡಲಾಗುತ್ತದೆ. ಸಣ್ಣ ವ್ಯಾಪಾರಿಗಳು ಈ ಯೋಜನೆಯ ಲಾಭ ಪಡೆದು ತಮ್ಮ ವ್ಯಾಪಾರ ನಡೆಸಬಹುದಾಗಿದೆ. ಸ್ವಸಹಾಯ ಸಂಘಗಳು ಮತ್ತು ಪಿಎಂಇಜಿಪಿ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಸಾಲ ನೀಡಲಾಗುತ್ತದೆ ಎಂದು ವಿವರಿಸಿದರು.‘ಮುದ್ರಾ’ ಮುಂತಾದ ಯೋಜನೆಗಳಲ್ಲಿ ಯಾವುದೇ ಭದ್ರತೆ ಇಲ್ಲದೆ ರೂ.10 ಲಕ್ಷದವರೆಗೆ ಸ್ವಯಂ ಉದ್ಯೋಗ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುತ್ತಿದ್ದು, ಗ್ರಾಹಕರು ಶ್ರದ್ಧೆ ಮತ್ತು ಪರಿಶ್ರಮದಿಂದ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರ, ಉದ್ದಿಮೆಗಳನ್ನು ಪ್ರಾರಂಭಿಸಿ ಯಶಸ್ಸು ಪಡೆಯಬಹುದಾಗಿದೆ . ಮುಖ್ಯವಾಗಿ ಸಿಬಿಲ್ ಸ್ಕೋರ್ ನ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಕೆನರಾಬ್ಯಾಂಕ್ ವ್ಯವಸ್ಥಾಪಕ ಹಣಮಂತ ಬೈರಗೊಂಡ ಸಲಹೆ ನೀಡಿದರು.ಕೇಂದ್ರ ಸರ್ಕಾರದ ಮಹತ್ವದ ಆಯುಷ್ಮಾನ್ ಯೋಜನೆಯಡಿ ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯ ಬಗ್ಗೆ  ಜನಸಾಮಾನ್ಯರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಸಂಕಲ್ಪ ಯಾತ್ರೆಯನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಹೇಳಿದರು.ನಬಾರ್ಡ್ ಇಲಾಖೆಯ ಜಿಲ್ಲಾ ವ್ಯವಸ್ಥಾಪಕಿ ರಶ್ಮಿರೇಖಾ, ಕೆಜಿಬಿ ವ್ಯವಸ್ಥಾಪಕ ಪ್ರದೀಪ್,ಮಂಜುನಾಥ್, ಇರ್ಪಾನ್, ಲಕ್ಷ್ಮೀಪತಿ ಗೌಡ, ಬಸಪ್ಪ , ಪಾಪಲಿಂಗಪ್ಪ ಇದ್ದರು.