ಜಗಳೂರು: ಬಿತ್ತನೆ ಬೀಜ ಕಂಪನಿಗಳಿಗೆ ಕೋಟಿಗಟ್ಟಲೆ ವಂಚಿಸಿ ಪರಾರಿಯಾದ ನಕಲಿ ವರ್ತಕ

ಸಂಜೆವಾಣಿ ವಾರ್ತೆ

ಜಗಳೂರು.ಜೂ.೬:ಪಟ್ಟಣದಲ್ಲಿ ನಕಲಿ  ಬಿತ್ತನೆ ಬೀಜ ಮಾರಾಟಗಾರನೊಬ್ಬ ಬೀಜ ಮಾರಾಟದ ನೆಪದಲ್ಲಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ.ಪಟ್ಟಣದ ದಾವಣಗೆರೆ ರಸ್ತೆಯಲ್ಲಿ’ ಕಿಸಾನ್ ಆಗ್ರೋ’ ಹೆಸರಿನಲ್ಲಿ ಬೀಜ ಮತ್ತು ಗೊಬ್ಬರ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯ ಮೂಲದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ವಿವಿಧ ಬೀಜ ಕಂಪನಿಗಳ ವಿತರಕರಿಗೆ ಕೋಟಿಗಟ್ಟಲೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟ ಮಾಡುವ ಉದ್ದೇಶದಿಂದ ಇಲ್ಲಿನ ಮರೇನಹಳ್ಳಿ ರಸ್ತೆಯ ಲೋಕೋಪಯೋಗಿ ಕಚೇರಿ ಎದುರಿನ ಹನುಮಂತಾಪುರ ಪಕೀರ್ ಸಾಬ್ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ಬಾಡಿಗೆ ಪಡೆದಿದ್ದನು. ಪಯೊನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ, ಲಕ್ಷ್ಮೀ ಸೀಡ್ಸ್, ವಿ.ಎನ್.ಆರ್, ಮುಂತಾದ 20ಕ್ಕೂ ಹೆಚ್ಚು ಕಂಪನಿಗಳ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ರೈತರಿಗೆ ಮಾರಾಟ ಮಾಡಿದ್ದು, ಆ ಹಣವನ್ನು ಬೀಜ ಪೂರೈಕೆ ಮಾಡಿದ್ದ ಕಂಪನಿಗಳಿಗೆ ಕೊಡದೆ ರಾತ್ರೋರಾತ್ರಿ ಪಟ್ಟಣದಿಂದ ಪರಾರಿಯಾಗಿದ್ದು, ಆತಂಕಗೊಂಡ ವಿತರಕರು, ಕಂಪನಿ ಉದ್ಯೋಗಿಗಳು ಪೊಲೀಸರ ಮೊರೆ ಹೋಗಿದ್ದಾರೆ.ನಾನು ಇಡೀ ಜಿಲ್ಲೆಗೆ 30 ವರ್ಷದಿಂದ ಬಾಯರ್, ಕಾವೇರಿ, ಪಯೊನಿಯರ್, ಮುಂತಾದ ಕಂಪನಿಗಳ ಈರುಳ್ಳಿ, ಮೆಕ್ಕೆಜೋಳ ಮತ್ತಿತರೆ ಬಿತ್ತನೆ ಬೀಜಗಳನ್ನು ಮಾರಟಗಾರರಿಗೆ  ಬೀಜ ಪೂರೈಸುತ್ತಿದ್ದೇನೆ.  ಜಗಳೂರಿನಲ್ಲಿ ಬೀಜ ಮಾರಾಟ ಮಾಡುವ ಕುಮಾರ್ ಗೌಡ ಎಂಬ ವ್ಯಕ್ತಿಗೆ  1.75 ಕೋಟಿ ವೆಚ್ಚದ ಬಿತ್ತನೆ ಬೀಜ ಕೊಟ್ಟಿದ್ದೇನೆ. ನನಗೆ ಕೇವಲ ರೂ.35 ಲಕ್ಷ ಾವನು ಕೊಟ್ಟಿದ್ದು, ಉಳಿದ ಹಣ ಕೊಡುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ ಈಗ ಮೋಸ ಮಾಡಿ ಓಡಿ ಹೋಗಿದ್ದಾನೆ. ಅವನ ಮೂಲದ ಬಗ್ಗೆ ಹೆಚ್ಚು ತಿಳಿದಿಲ್ಲ. ನಕಲಿ ಆಧಾರದ ಕಾರ್ಡ್ ಕೊಟ್ಟು ನಮಗೆ ದಿಕ್ಕು ತಪ್ಪಿಸಿದ್ದಾನೆ. ನನಗೆ ಕನಿಷ್ಟ ರೂ.1ಕೋಟಿಗೂ ಹೆಚ್ಚು ವಮಚಿಸಿದ್ದಾನೆ’ ಎಂದು ದಾವಣಗೆರೆ ಮೂಲದ ವಿತರಕರಾದ ಶಿವಮೂರ್ತಿ “ ತಿಳಿಸಿದರು.ಇದೇರೀತಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಸೇರಿದ ವಿತರಕರು, ಉದ್ಯೋಗಿಗಳು ಕುಮಾರ್ ಗೌಡ ಎಂಬ ವ್ಯಕ್ತಿಯನ್ನು ನಂಬಿ ಐದಾರು ಕೋಟಿ ರೂಪಾಯಿ ಮೌಲ್ಯದ  ಬಿತ್ತನೆ ಬೀಜದ ದಾಸ್ತಾನನ್ನು ಕೊಟ್ಟಿದ್ದಾರೆ. ಐದಾರು ದಿನಗಳಿಂದ ಮಾರುಕಟ್ಟೆ ಬೆಲೆಗಿಂತ  ಅರ್ಧದಷ್ಟು ಕಡಿಮೆ ಬೆಲೆಗೆ ತರಾತುರಿಯಲ್ಲಿ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ.