ಜಗಳೂರು: ಗೋಶಾಲೆ ತೆರೆಯಲು ಆಗ್ರಹಿಸಿ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ಫೆ.೧೭ :-ತೀವ್ರ ಬರಗಾಲದಿಂದಾಗಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ( ಹುಚ್ಚವ್ವನಹಳ್ಳಿ ಮಂಮುನಾಥ್ ಬಣ)ದ ನೇತೃತ್ವದಲ್ಲಿ  ಪಟ್ಟಣದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದ ತೀವ್ರ ಬರಗಾಲ ಎದುರಾಗಿದ್ದು, ಅಂತರ್ಜಲ ಕುಸಿತವಾಗಿದೆ. ಎಲ್ಲಾ ಕೆರೆಕಟ್ಟೆಗಳು ಬರಿದಾಗಿದ್ದು, ರೈತರ ಸಾವಿರಾರು ಕೊಳವೆಬಾವಿಗಳು ಸರಣಿ ರೂಪದಲ್ಲಿ ವಿಫಲವಾಗುತ್ತಿವೆ. ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಕ್ಷಾಮ ಕಾಣಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ದುಬಾರಿ ವೆಚ್ಚದಲ್ಲಿ ಟ್ಯಾಂಕರ್ ನೀರನ್ನು ಖರೀದಿಸಿ ಪೂರೈಕೆ ಮಾಡಲಾಗುತ್ತದೆ. ಜಾನುವಾರುಗಳು ಮೇವಿಲ್ಲದೆ ಸಾವಿನ ಅಂಚಿಗೆ ಬಂದು ತಲುಪಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ತಾಲ್ಲೂಕು ಆಡಳಿತ ಕೂಡಲೇ ತಾಲ್ಲೂಕಿನ ವಿವಿಧೆಡೆ ಕೂಡಲೇ ಗೋಶಾಲೆ ತೆರೆಯಬೇಕು . ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಬರದಿಂದ ಕೆಲಸವಿಲ್ಲದೆ ಕಂಗೆಟ್ಟಿರುವ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರು ಬರಗಾಲದಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಅವರು ಈಚೆಗೆ ತಾಲ್ಲೂಕಿನ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪೋಷಕರು ಕೇಳಿದಾಗ, ಮಕ್ಕಳು ತಮ್ಮ ಬಾಟಲ್ ಗಳ ಮೂಲಕ ಮನೆಯಿಂದ ನೀರು ಕಡ್ಡಾಯವಾಗಿ ತರಬೇಕು ಎಂದು ಬೇಜವಾಬ್ಧಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕಾನನ ಕಟ್ಟೆ ತಿಪ್ಪೇಸ್ವಾಮಿ,ತಾಲ್ಲೂಕು ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ, ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಪ್ರಹ್ಲಾದಪ್ಪ, ಸುಪುತ್ರಪ್ಪ,ರವಿ.ಸತೀಶ್ ಮುಂತಾದವರಿದ್ದರು.