ಜಗಳೂರು.ಏ.೪; ತಾಲ್ಲೂಕಿನ ಕಲ್ಲೇದವರಪುರ ಗ್ರಾಮವು ಶ್ರೀ ಕಲ್ಲೇಶ್ವರ ಸ್ವಾಮಿ ನೆಲೆಸಿರುವ ಭಕ್ತಿಯ ತಾಣ. ಕಾಪಾಡು ಎಂದು ಕರೆದವರ ಕೈ ಹಿಡಿದು ನಡೆಸುವ ಸ್ವಾಮಿಯ ಮಹಿಮೆ ಅಪಾರ. ಜೋಳದರಾಶಿ, ರೊಟ್ಟಿ ಹಬ್ಬ, ಗುಗ್ಗರಿ ಹಬ್ಬ, ಹಿಟ್ಟಿನ ಹುಣ್ಣಿಮೆ, ದಸರಾ, ಶ್ರಾವಣದ ಪೂಜೆ ತುಂಬಾ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲ್ಪಡುತ್ತದೆ.ಪ್ರತಿ ಸೋಮವಾರದಂದು ಇಡೀ ಗ್ರಾಮವೇ ಹಬ್ಬವನ್ನು ಆಚರಿಸುವಂತಹ ವಾತಾವರಣದಲ್ಲಿ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ಸ್ವಾಮಿಗೆ ಭಕ್ತಿಯ ಸಮರ್ಪಣೆ ಮಾಡುತ್ತಾರೆ. ಸುತ್ತಮುತ್ತಲಿನ ಹಳ್ಳಿಗಳಿಂದಲೂ ಹಾಗೂ ದೂರ ದೂರದ ಊರುಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಬಂದಂತ ಭಕ್ತರು ಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಹೋದರೆ ಖಂಡಿತ ಅದು ನೆರವೇರುತ್ತದೆ ಸಂಕಲ್ಪ ಸಿದ್ಧಿಸಿದ ನಂತರ ಬಂದು ಹರಕೆಯನ್ನು ತೀರಿಸುತ್ತಾರೆ.ಹೊಯ್ಸಳರ ಕಾಲದಲ್ಲಿ ಸುಮಾರು 11 – 12ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.ಮೊದಲು ಇಲ್ಲಿ ಊರು ಇರಲಿಲ್ಲ ಇದೊಂದು ಅರಣ್ಯ ಪ್ರದೇಶವಾಗಿದ್ದು ಈ ಮಾರ್ಗವಾಗಿ ವ್ಯಾಪಾರಿ ಒಬ್ಬ ಹೋಗುತ್ತಿರುವಾಗ ಸ್ವಲ್ಪ ವಿಶ್ರಾಂತಿಗಾಗಿ ಈ ಸ್ಥಳದಲ್ಲಿ ವಿರಮಿಸುತ್ತಾ ಅಡುಗೆ ಮಾಡಲು ಮುಂದಾಗುತ್ತಾನೆ. ಮೊದಲೇ ಇದ್ದಂತಹ ಒಂದು ಕಲ್ಲಿನ ಜೊತೆಗೆ,ಮತ್ತೆರಡು ಕಲ್ಲನ್ನು ಜೋಡಿಸಿ ಅಡುಗೆಯನ್ನು ಅಡುಗೆ ಮಾಡುತ್ತಿರುವಾಗ ಒಲೆಗೆ ಇಟ್ಟಂತಹ ಒಂದು ಕಲ್ಲಿನ ಸ್ವಲ್ಪ ಭಾಗ ಸಿಡಿಯಿತು ಮತ್ತು ಅನ್ನ ಕೆಂಪಾಯಿತು.ಇದರಿಂದ ಗಾಬರಿಗೊಂಡ ವ್ಯಾಪಾರಿಗೆ ದೈವವಾಣಿಯೊಂದು ಕೇಳಿತು. “ನಾನು ಕಲ್ಲಿನ ರೂಪದಲ್ಲಿರುವ ಕಲ್ಲೇಶ್ವರ, ಸಿಡಿದ ಈ ಕಲ್ಲಿನ ಭಾಗವನ್ನು ನಿನ್ನ ವ್ಯಾಪಾರದಲ್ಲಿ ತೂಕಕ್ಕೆ ಬಳಸಿಕೋ, ಇದೊಂದೇ ಕಲ್ಲು ನೀನೆಷ್ಟು ತೂಕ ಹೇಳಿದರು ಅಷ್ಟು ತೂಕಕ್ಕೆ ತೂಗುತ್ತದೆ, ನಿನಗೆ ಒಳ್ಳೆಯದಾಗುತ್ತದೆ ನನ್ನನ್ನು ಸ್ಮರಿಸು,” ಎಂದು ಹೇಳಿದಂತಾಯಿತು.ನಂತರ ವ್ಯಾಪಾರಿಯು ಅಲ್ಲೊಂದು ಚಪ್ಪರಹಾಕಿ ಪೂಜಿಸಿ ನಮಸ್ಕಾರಿಸಿ ವ್ಯಾಪಾರಕ್ಕೆ ಹೊರಟು ಹೋದನು. ಅವನಿಗೆ ತುಂಬಾ ಲಾಭ ಬಂದಿತ್ತು.ಅದರಿಂದ ಪುಟ್ಟ ದೇವಾಲಯ ಕಟ್ಟಿಸಿ ಶ್ರೀ ಕಲ್ಲೇಶ್ವರ ಎಂದು ಪೂಜಿಸಿದನು. ನಂತರ ಹೊಯ್ಸಳರ ಕಾಲದಲ್ಲಿ ದೇವಸ್ಥಾನ ನಿರ್ಮಿತವಾಗಿ ಇಲ್ಲಿ ಜನರು ಊರನ್ನು ಕಟ್ಟಿಕೊಂಡು ವಾಸಿಸಲು ಪ್ರಾರಂಭಿಸಿದರು. ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯ ಲಕ್ಷಣಗಳನ್ನು ಹೊಂದಿರುವ ದೇವಸ್ಥಾನದಲ್ಲಿ ದೇವಸ್ಥಾನ ಗರ್ಭಗುಡಿಯಲ್ಲಿ ಉದ್ಭವ ಮೂರ್ತಿ ಶಿವಲಿಂಗವಿದೆ.ಎದುರಿಗೆ ನಂದಿ, ನವರಂಗ ಮಂಟಪ, ಮಹಾಮಂಟಪ, ಉಯ್ಯಾಲೆ ಕಂಬ, ಗಣೇಶ,ಪ್ರದಕ್ಷಿಣ ಆವರಣ,ಪೂರ್ವ ಅಭಿಮುಖವಾಗಿ ಮಹಾದ್ವಾರ ಮತ್ತು ದಕ್ಷಿಣ ಅಭಿಮುಖವಾಗಿ ಮತ್ತೊಂದು ದ್ವಾರವಿದ್ದು ಎರಡು ಕಡೆಯೂ ಬೃಹತ್ ನಂದಿ ಇದೆ. ತ್ರಿಕೂಟ ಲಿಂಗ ದೇವಸ್ಥಾನವು ಆವರಣದಲ್ಲಿ ಇದೆ.ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಲಿಂಗಗಳಿಗೆ ಏಕಕಾಲದಲ್ಲಿ ಇಲ್ಲಿ ಅಭಿಷೇಕ ನಡೆಯುತ್ತದೆ ಮತ್ತು ಇದೇ ದೇವಾಲಯದಲ್ಲಿ ಅಷ್ಟಲಕ್ಷ್ಮೀಯರನ್ನು ಸಹ ನಾವು ಕಾಣಬಹುದು.ದೇವಸ್ಥಾನದ ಪ್ರವೇಶ ದ್ವಾರದ ಹತ್ತಿರವಿರುವ ಉಯ್ಯಾಲೆ ಕಂಬದ ಬಲಗಡೆ ಹಾಗೂ ದೇವಸ್ಥಾನದ ಎಡ ಗೋಡೆಯ ಮೇಲೆ ಗಜಲಕ್ಷ್ಮೀಯರನ್ನು ಸಹ ಪ್ರತಿಷ್ಠಾಪಿಸಲಾಗಿದೆ.ಶಿಲಾ ಶಾಸನಗಳು,ವೀರಗಲ್ಲು, ಮಾಸ್ತಿಗಲ್ಲುಗಳು ಮತ್ತು ಮಜ್ಜನ ಮಂಟಪವು ಚರಿತ್ರೆಯ ಸಾಕಷ್ಟು ಘಟನೆಗಳಿಗೆ ಪುರಾವೆಗಳಾಗಿ ನಿಂತಿವೆ. ಹೊಯ್ಸಳರ ಲಾಂಛನವು ಸಹ ದೇವಸ್ಥಾನದ ಮೇಲಿದೆ. ದೇವಸ್ಥಾನದಲ್ಲಿ ನವರಂಗ ಮಂಟಪದ ನಂತರ ಬರುವ ಪ್ರಾಂಗಣದಲ್ಲಿ ಗೌರಮ್ಮ, ವೀರಭದ್ರ ಸ್ವಾಮಿ ಮತ್ತು ಸುಬ್ರಹ್ಮಣ್ಯೇಶ್ವರ ಸ್ವಾಮಿಯು ನೆಲೆಸಿದ್ದಾರೆ. ಮೇಲ್ಚಾವಣಿಯಲ್ಲಿರುವ ಕಮಲದಲ್ಲಿ ಹಾಗೂ ಕಂಬಗಳ ಮೇಲು ರಾಮಾಯಣ ಮಹಾಭಾರತದ ಕಥೆಯನ್ನಾಧರಿಸಿದ ದೇವರ ಕೆತ್ತನೆಗಳಿವೆ.ಇಡೀ ದೇವಸ್ಥಾನದಲ್ಲಿ 101 ದೇವರು ನೆಲೆಸಿದ್ದು ಪ್ರತಿದಿನವೂ ತ್ರಿಕಾಲ ಪೂಜೆ ಹಾಗೂ ದೀಪಾರಾಧನೆ ನಡೆಯುತ್ತದೆ.ಕಲ್ಲಿನ ಉದ್ಭವ ಮೂರ್ತಿ ಕಲ್ಲೇಶ್ವರನ ಸನ್ನಿಧಿಯ ಆದ್ದರಿಂದ ಈ ಊರಿಗೆ ಕಲ್ಲೇದೇವರಪುರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ನಮ್ಮಜ್ಜ ಅಜ್ಜಿಯರು ಹೇಳುವಂತೆ ಸುತ್ತ ಮುತ್ತಲಿನ ಗ್ರಾಮದಲ್ಲಿ ಯಾರದ್ದಾದರೂ ಮದುವೆ ನಿಶ್ಚಯವಾಗಿದ್ದರೆ, ವರನಕಡೆಯವರು , ವಧುವಿನ ಕುಟುಂಬದವರಿಗೆ ಕಲ್ಲಪ್ಪ ( ಶ್ರೀ ಕಲ್ಲೇಶ್ವರ) ನ ಜಾತ್ರೆಯಲ್ಲಿ ಕಡ್ಲೆ ಮಿಠಾಯಿ ಹಾಕಿಸುವುದು ವಾಡಿಕೆಯಾಗಿತ್ತಂತೆ. ಪ್ರತಿ ಸೋಮವಾರವೂ ಇಲ್ಲಿರುವ ಪ್ರತಿಯೊಂದು ಮನೆಯಲ್ಲಿಯೂ ಹೋಳಿಗೆ, ಪಾಯಸ ಮಾಡಿ ದೇವರಿಗೆ ನೈವೇದ್ಯ ಮಾಡಿ ಹೊಲಕ್ಕೆ ಬುತ್ತಿಯನ್ನು ತಂದರೆ ಸುತ್ತಮುತ್ತಲಿನ ಹೊಲದಲ್ಲಿದ್ದವರಿಗೂ ಸಹ “ಇಂದು ಸೋಮವಾರ ಹಬ್ಬದ ಊಟಕ್ಕೆ ಬನ್ನಿ” ಎಂದು ವಿಶೇಷವಾಗಿ ಆಹ್ವಾನಿಸಿ ಅಕ್ಕಪಕ್ಕ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೂ ಸಹ ಊಟಕ್ಕೆ ಬಡಿಸುತ್ತಿದ್ದರಂತೆ. ಇಂದು ಸಹ ಪ್ರತಿಯೊಬ್ಬರೂ ಹೋಳಿಗೆ, ಮಾಡದಿದ್ದರೂ ಸೋಮವಾರದಂದು ವಿಶೇಷತೆಯನ್ನು ಅನುಸರಿಸುತ್ತಲೇ ಬಂದಿದ್ದಾರೆ. ಪ್ರತಿ ಅಮಾವಾಸ್ಯೆ, ಶ್ರಾವಣ ಮಾಸದಂದು ಅನ್ನದಾಸೋಹ, ಮಹಾಭಾರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಅಷ್ಟೋತ್ತರ ಬಿಲ್ವಾರ್ಚನೆ, ದೀಪಾರಾಧನೆ ಇರುತ್ತದೆ.ಯುಗಾದಿಯ ಚಂದ್ರ ದರ್ಶನ ವಾದ ನಂತರ ತೇರಿನ ಗಾಲಿಯನ್ನು ತೇರಿನ ಮನೆಯಿಂದ ಹೊರಹಾಕಿ, ಸುಮಾರು 15 ದಿನಕ್ಕೆ ಸರಿಯಾಗಿ ಚೈತ್ರ ಮಾಸದ ಹುಣ್ಣಿಮೆಯಂದು ನಡೆಯುವ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ,ಸುಮಾರು ಒಂದು ವಾರ ವಿಶೇಷ ಪೂಜಾ ವಿಧಿ ವಿಧಾನಗಳಿಂದ ನಡೆಯುತ್ತದೆ.ನಂತರ ಬಸವ ಜಯಂತಿಯವರೆಗೂ ನಡೆಯುವ ದನಗಳ ಜಾತ್ರೆ ಇಲ್ಲಿ ಮತ್ತೊಂದು ವಿಶೇಷವಾಗಿದೆ.