ಜಗಳದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ಮಾಲೂರು.ಸೆ೨೨:ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಸವರ್ಣಿಯರ ಗುಂಪು ಅವಾಚ್ಯ ಶಬ್ಥಗಳಿಂದ ನಿಂದಿಸಿ ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಮನನೊಂದ ದಲಿತ ವ್ಯಕ್ತಿಯೊಬ್ಬ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುರಳಗೆರೆ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ತಾಲೂಕಿನ ಕಸಬಾ ಹೋಬಳಿಯ ನೊಸಗೆರೆ ಗ್ರಾಪಂ ವ್ಯಾಪ್ತಿಯ ಹುರಳಗೆರೆ ಗ್ರಾಮದ ಶ್ರೀನಿವಾಸ (೩೨) ಎಂದು ಗುರ್ತಿಸಲಾಗಿದೆ. ಹುರಳಗೆರೆ ಗ್ರಾಮದ ಸವರ್ಣಿಯರಾದ ರಮೇಶ್, ಅಶೋಕ, ಧರ್ಮೇಂದ್ರ, ಮಂಜುಳ, ವರ್ತೂರ್ ಮಂಜುನಾಥ, ಶಶಿಕುಮಾರ್ ಎಂಬುವರು ಹಲ್ಲೆ ನಡೆಸಿ ಅವಾಚ್ಯ ಶಬ್ಥಗಳಿಂದ ನಿಂದಿಸಿದ ಹಿನ್ನಲೆಯಲ್ಲಿ ಮನನೊಂದ ಶ್ರೀನಿವಾಸ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುರಳಗೆರೆ ಗ್ರಾಮದ ಶ್ರೀನಿವಾಸನ ಮೇಲೆ ರಮೇಶ್, ಅಶೋಕ, ಧರ್ಮೇಂದ್ರ, ಮಂಜುಳ, ವರ್ತೂರ್ ಮಂಜುನಾಥ, ಶಶಿಕುಮಾರ್ ಎಂಬುವರು ಸೆ.೧೯ರಂದು ಸಂಜೆ ೫ ಗಂಟೆಯ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ. ಶ್ರೀನಿವಾಸನ ಬಟ್ಟೆಗಳನ್ನು ಹರಿದು ಎಳೆದಾಡಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ಥಗಳಿಂದ ನಿಂದಿಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ವಿಷಯವಾಗಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನಲೆ ಈ ಬಗ್ಗೆ ದೂರು ನೀಡಿರಲಿಲ್ಲ. ಮತ್ತೆ ಸೆ.೨೦ ರಂದು ಸಂಜೆ ೪.೩೦ರ ಸಮಯದಲ್ಲಿ ಶ್ರೀನಿವಾಸನ ಮನೆಗೆ ಏಕಾಏಕಿ ಗುಂಪು ಕಟ್ಟಿಕೊಂಡು ದೊಣ್ಣೆ, ಮಚ್ಚುಗಳೊಂದಿಗೆ ಬಂದು ಅವಾಚ್ಯ ಶಬ್ಥಗಳ ಮೂಲಕ ಜಾತಿನಿಂದನೆ ಮಾಡಿದ್ದಾರೆ. ಪೊರಕೆ, ಚಪ್ಪಲಿಯಿಂದ ಹೊಡೆದು ಅಮಾನಿಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.
ಇದರಿಂದ ಮನನೊಂದ ಶ್ರೀನಿವಾಸ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಮಗನ ಸಾವಿಗೆ ಕಾರಣವಾಗಿರುವ ಎಲ್ಲಾ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ತಂದೆ ಮಾಲೂರು ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.