ಜಗನ್ ದೇಶದ ಅತ್ಯಂತ ಶ್ರೀಮಂತ

ನವದೆಹಲಿ, ಏ.೧೩-೫೦೦ ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ದೇಶದ ಅತ್ಯಂತ ಶ್ರೀಮಂತ ಸಿಎಂ ಆಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಸಿಎಂ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ.

ಎಲ್ಲಾ ೩೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಸ್ವಘೋಷಿತ ಅಫಿಡವಿಟ್‌ಗಳನ್ನು ಅವಲೋಕಿಸಿ ವರದಿ ಹೊರತರಲಾಗಿದೆ ಎಂದು ಎಡಿಆರ್ ಮತ್ತು ಇಲೆಕ್ಷನ್ ವಾಚ್ ಹೇಳಿವೆ.

೩೦ ಸಿಎಂಗಳ ಪೈಕಿ ೨೯ (ಶೇ. ೯೭) ಕೋಟ್ಯಾಧಿಪತಿಗಳಾಗಿದ್ದಾರೆ ಹಾಗೂ ಸರಾಸರಿ ರೂ. ೩೩.೯೬ ಕೋಟಿ ಸಂಪತ್ತು ಹೊಂದಿದ್ದಾರೆ. ಈ ೩೦ ಮಂದಿಯ ಪೈಕಿ ೧೩ ಮಂದಿ (ಶೇ. ೪೩) ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಕೊಲೆ, ಕೊಲೆಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳಿವೆ.

ಗರಿಷ್ಠ ಆಸ್ತಿಯ ಒಡೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ (ರೂ. ೫೧೦ ಕೋಟಿಗೂ ಹೆಚ್ಚು) ಆಗಿದ್ದರೆ, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು (ರೂ. ೧೬೩ ಕೋಟಿಗೂ ಹೆಚ್ಚು) ಹಾಗೂ ಒಡಿಶಾದ ನವೀನ್ ಪಟ್ನಾಯಕ್ (ರೂ. ೬೩ ಕೋಟಿಗೂ ಹೆಚ್ಚು) ಇದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ೧ ಕೋಟಿ ರೂಪಾಯಿ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ೧೫ ಲಕ್ಷ ರೂಪಾಯಿ ಆಸ್ತಿ ಹೊಂದಿರುವ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದು ಎಡಿಆರ್ ವರದಿ ತಿಳಿಸಿದೆ.