ಜಗನ್ನಾಥ ಡಿಗ್ಗಿ ದಂಪತಿಗೆ “ದಾಸೋಹ ಜ್ಞಾನ ರತ್ನ” ಪ್ರಶಸ್ತಿ ಪ್ರದಾನ

ಕಲಬುರಗಿ;ಮಾ.11: ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಶುಕ್ರವಾರ ಕಲಬುರಗಿ ನಗರದ ಮಹಾಮನೆಯಲ್ಲಿ ಜಗನ್ನಾಥ ಡಿಗ್ಗಿ ದಂಪತಿಗಳಿಗೆ ಪ್ರತಿಷ್ಠಿತ “ದಾಸೋಹ ಜ್ಞಾನ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಿದರು.

50,000 ನಗದು, ಪ್ರಶಸ್ತಿ ಪತ್ರ, ಶಾಲು ಮತ್ತು ಫಲಪುಷ್ಪವನ್ನೊಳಗೊಂಡ ಪ್ರಶಸ್ತಿಯನ್ನು ಶರಣಬಸವೇಶ್ವರರ ಕಟ್ಟಾ ಭಕ್ತರು ಹಾಗೂ ಪ್ರಸಿದ್ಧ ವ್ಯಾಪಾರಿ ಮತ್ತು ಪರೋಪಕಾರಿ ಕುಟುಂಬದಿಂದ ಬಂದ ಡಿಗ್ಗಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು. ಡಾ.ಅಪ್ಪಾಜಿ ಮತ್ತು ಡಾ.ದಾಕ್ಷಾಯಿಣಿ ಅವ್ವಾಜಿಯವರು ಶರಣಬಸವೇಶ್ವರ ದೇವರ ಮೇಲಿನ ಅಚಲ ಭಕ್ತಿಗಾಗಿ ಡಿಗ್ಗಿ ದಂಪತಿಗಳನ್ನು ಶ್ಲಾಘಿಸಿದರು ಮತ್ತು ಈ ವರ್ಷ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಇದಕ್ಕೂ ಮುನ್ನ ಜಿಲ್ಲೆಯ ಮುಗಳನಾಗವಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ವಿಶೇಷ ಉಪನ್ಯಾಸ ನೀಡಿ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಹಂತ ಹಂತವಾಗಿ ವಿವರಿಸಿದರು.

ಶ್ರೀ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಶರಣಬಸವೇಶ್ವರ ಸಂಸ್ಥಾನವು ಈ ಭಾಗದ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ವಿಶೇಷವಾಗಿ ಮಹಿಳೆಯರ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. ಸಮಾಜದಲ್ಲಿನ ಮಹಿಳೆಯರಿಗೆ ಹಾಗೂ ವಂಚಿತ ವರ್ಗದವರಿಗೆ ಶೈಕ್ಷಣಿಕ ಅವಕಾಶಗಳ ಹೊಸ ದಾರಿಗಳನ್ನು ತೆರೆದಿಡುವಲ್ಲಿ 7ನೇ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ 8ನೇ ಪೀಠಾಧಿಪತಿ ಪೂಜ್ಯ ಶರಣಬಸವಪ್ಪ ಅಪ್ಪಾಜಿ ಅವರು ವಹಿಸಿರುವ ಪಾತ್ರವನ್ನು ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಆದರೆ 1934ರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ನಿಜಾಮ ದಬ್ಬಾಳಿಕೆಯ ಸರ್ಕಾರದ ವಿರುದ್ಧ ಹೆಣ್ಣು ಮಕ್ಕಳಿಗಾಗಿಯೇ ಮೊಟ್ಟಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ತೆರೆದರು. ಆಗ ಮಹಿಳೆಯರ ಸ್ಥಿತಿ ಹಿಂದುಳಿದಿತ್ತು ಮತ್ತು ಅನೇಕರು ಅನಕ್ಷರಸ್ಥರಾಗಿ ಮತ್ತು ಆರ್ಥಿಕವಾಗಿ ಹಾಗೂ ದುರ್ಬಲವಾಗಿ ಹಿಂದುಳಿಯುತ್ತಾರೆ ಎಂದು ಮನಗಂಡ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಲು ಸಂಪೂರ್ಣ ಕಾರಣಿಕರ್ತರು ಎಂದು ಹೇಳಿದ ಅವರು, ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳ ಸರಣಿಯನ್ನು ಸ್ಥಾಪಿಸುವುದರ ಜೊತೆಗೆ ಇಡೀ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿಶೇಷವಾಗಿ ಮಹಿಳೆಯರಿಗಾಗಿಯೇ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಅಪ್ಪಾಜಿಯವರಿಗೆ ಸಲ್ಲಬೇಕೆಂದರು. ಇದು ಇಡೀ ರಾಜ್ಯದಲ್ಲಿಯೇ ಮಹಿಳೆಯರಿಗಾಗಿ ಎರಡನೇಯ ವಿಶೇಷ ಇಂಜಿನಿಯರಿಂಗ್ ಕಾಲೇಜಾಗಿದೆ ಶ್ಲಾಘಿಸಿದರು. ಪೂಜ್ಯ ಡಾ.ಅಪ್ಪಾಜಿ ಅವರು ಬಹುಶಿಸ್ತೀಯ ಕೋರ್ಸ್‍ಗಳನ್ನು ಒದಗಿಸುವ ಮೊದಲ ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಕಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ನಂದಗಾಂವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.