ಜಗದ ಕವಿ, ಯುಗದ ಕವಿಯ ವಿಶ್ವಮಾನವ ಸಂದೇಶ ಸಕ್ಕರೆ ಮಿಠಾಯಿ ಸವಿದಂತೆ” – ಪ್ರೊ. ಎಸ್.ಬಿ.ರಂಗನಾಥ್

ದಾವಣಗೆರೆ.ಡಿ.೩೦; 21ನೇ ಶತಮಾನದ ಆದಿಕವಿ ಕುವೆಂಪುರವರು ರಚಿಸಿದ ಸಾಹಿತ್ಯದಿಂದ ನಮ್ಮ ನಾಡಿನ ಕನ್ನಡದ ಬೇರುಗಳು ವಿಶ್ವದೆಲ್ಲೆಡೆ ಹರಡುವಂತೆ ಮಾಡಿದ ಮಹಾನ್ ಚೇತನ ಕುವೆಂಪು. ಅವರು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರುವುದು ನಮ್ಮ ಪುಣ್ಯ. ಜಗದ ಕವಿ ಯುಗದ ಕವಿ ವಿಶ್ವಮಾನವ ಸಂದೇಶ ಸಾರಿದ ಕವಿಯ ಸಾಹಿತ್ಯದ ಅಧ್ಯಯನ ಸಕ್ಕರೆ ಮಿಠಾಯಿ ಸವಿದಂತೆ ಎಂದು ಹಿರಿಯ ಸಾಹಿತಿಗಳು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ.ಎಸ್.ಬಿ.ರಂಗನಾಥ್ ತಿಳಿಸಿದರು. ಅವರಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ದಾವಣಗೆರೆ ವಿಜ್ಞಾನ ಕೇಂದ್ರ, ಯುವಸ್ಪಂದನಾ ಕೇಂದ್ರ ಸಂಯುಕ್ತವಾಗಿ ಏರ್ಪಡಿಸಿದ್ದ ಕುವೆಂಪು ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕುವೆಂಪು ಹೆಸರು ಕೇಳಿದರೆ, ಹೇಳಿದರೆ ರೋಮಾಂಚನವಾಗುತ್ತದೆ. ಕುವೆಂಪುರವರು ಕಾವ್ಯಗಳು, ಕಾದಂಬರಿಗಳು, ನಾಟಕಗಳ ಮೂಲಕ ನಮಗೆ ಅದಮ್ಯ ಚೇತನವನ್ನು ತುಂಬಿದ್ದಾರೆ. “ಓ ಚೇತನ ಆಗು ನೀ ನಿಕೇತನ” ಈ ಕಾವ್ಯದ ಮೂಲಕ ಎಷ್ಟು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆಂಬುದನ್ನು ನಾವುಗಳು ಊಹಿಸಿಕೊಳ್ಳಬಹುದಾಗಿದೆ. ಆ ಮತ, ಈ ಮತ ಯಾವುದು ಇಲ್ಲ, ಎಲ್ಲರಲ್ಲೂ ಇರುವುದೆಂದೇ ಮನುಜ ಮತ ಎಂದು ತಿಳಿಸಿ, ಜೀವನ ಅನ್ನುವುದು ಅನಂತತೆಯ ಕಡೆಗೆ ಸಾಗುವ ಪಯಣ ಎಂದು ತಿಳಿಸಿದ್ದಾರೆ. ಅವರು ಅನೇಕ ಕವನಗಳಲ್ಲಿ ಪದಗಳ ಜೊತೆ ಆಟವಾಡಿದ್ದಾರೆ, ಅದರ ಮೂಲಕ ಸಾಹಿತ್ಯದ ರಸದೌತಣ ನೀಡಿದ್ದಾರೆ. ಜನರು ಸಾಮಾಜಿಕ ಬದುಕಿನಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಸಮ ಸಮಾಜದ ಕನಸ್ಸನ್ನು ಹೊತ್ತು ಸಾಗಬೇಕೆಂದು ತಿಳಿಸಿ “ವಿಚಾರ ಕ್ರಾಂತಿಗೆ ಕರೆ ನೀಡಿದ ಯುಗದ ಕವಿ” ಎಂದು ಸ್ಮರಿಸಿದರು.ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ದಾವಣಗೆರೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀ ಬಿ.ಎಂ.ಧಾರುಕೇಶ್ ಮಾತನಾಡಿ, ಪ್ರಸ್ತುತ ದಿನಮಾನದ ಕೋವಿಡ್-19 ಸಂದರ್ಭದಲ್ಲಿ ಜನತೆಯು ಅತ್ಯಂತ ಕಠಿಣ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಷ್ಠದ ಸಂದರ್ಭದಲ್ಲಿ ಜನರ ಕಷ್ಟಗಳ ಪರಿಸ್ಥಿತಿಯಲ್ಲಿನ ಜನರ ಕಷ್ಟಗಳನ್ನು ಕುವೆಂಪುರವರು ಬಹಳ ದಿನಗಳ ಹಿಂದೆಯೇ ತಮ್ಮ ಸಾಹಿತ್ಯದಲ್ಲಿ ಪರಿಚಯಿಸಿದ್ದಾರೆ. ಕುವೆಂಪುರವರು ನಮ್ಮ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದೆಲ್ಲೆಡೆ ಅವರ ಸಾಹಿತ್ಯಾಭಿಮಾನಿಗಳಿದ್ದಾರೆ. ಪ್ರಚಲಿತ ವಿದ್ಯಾಮಾನಗಳೊಂದಿಗೆ ಹೊಂದಿಕೊಂಡು, ಪ್ರಕೃತಿ ಸಹಜ ಜೀವನ ನಡೆಸಬೇಕೆಂದು ಕರೆಕೊಟ್ಟ ಮೇರು ಸಾಹಿತಿ ಕುವೆಂಪು ಎಂದರೆ ತಪ್ಪಾಗಲಿಕ್ಕಿಲ್ಲ. ಜ್ಞಾನ ವಿಜ್ಞಾನದ ಮೂಲಕ ಪ್ರಗತಿಯನ್ನು ಹೊಂದಬೇಕು, ಕಂದಾಚಾರದಿಂದ ಮುಕ್ತವಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ತಮ್ಮ ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಒತ್ತಿ ಹೇಳಿದ್ದಾರೆಂದು ತಿಳಿಸಿದರು. ದಾವಣಗೆರೆ ಬಿ.ಐ.ಇ.ಟಿ. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಿ ಶ್ರೀಮತಿ ಎ.ಹೆಚ್.ಸುಂಗ್ಲಾದೇವಿ ಮಾತನಾಡಿ ಪಂಪನನ್ನು ಆದಿಕವಿ ಎಂದು ಕರೆದರೆ, ಕುವೆಂಪುರವರು 21ನೇ ಶತಮಾನದ ಆದಿ ಕವಿಯಾಗಿದ್ದಾರೆ. ಅದಕ್ಕಾಗಿಯೇ “ಪಂಪನಿಂದ ಕುವೆಂಪುರವರವರೆಗೆ” ಎಂಬ ಮಾತಿದೆ. ಅವರ ಆತ್ಮ ಚರಿತ್ರೆ ನೆನಪಿನ ದೋಣಿಯಲ್ಲಿ ಹಂಚಿಕೊಂಡಂತೆ, ಅವರ ಆಂಗ್ಲಭಾಷ ಗುರುಗಳಾದ ಜೆ.ಹೆಚ್.ಕಜಿನ್ಸ್ರವರ ಪ್ರೇರಣೆಯಿಂದ ಇಂಗ್ಲೀಷ್ ಸಾಹಿತ್ಯದ ರಚನೆಯಿಂದ ಹಿಂದೆ ಸರಿದು, ಕನ್ನಡ ಸಾಹಿತ್ಯದ ಕೃಷಿಯನ್ನು ಆರಂಭಿಸುತ್ತಾರೆ. ಇದರಿಂದ ನಾಡಿನ ದೊಡ್ಡ ಸಾಹಿತಿಯಾಗಿ ಹೊರಹೊಮ್ಮಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾಗಿದ್ದ ಕುಂದುವಾಡ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾದ ಶ್ರೀ ಅಂಗಡಿ ಸಂಗಪ್ಪನವರು ಮಾತನಾಡಿ, ಕುವೆಂಪುರವರು ತಮ್ಮ ಸಾಹಿತ್ಯ ರಚನೆಯ ಉದ್ದಕ್ಕೂ ವಿಶ್ವ ಮಾನವ ಕುಲಕ್ಕೆ ಒಳಿತಾಗಲಿ ಎಂದು ಹಾರೈಸಿದ್ದಾರೆ. ಮೂಡನಂಬಿಕೆಯಿಂದ ಜನ ಹೊರ ಬಂದು ನವ ಸಮಾಜ ಕಟ್ಟಲು ಕರೆನೀಡಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವಮಾನವ ಮಂಟಪದ ಆವರಗೆರೆ ರುದ್ರಮುನಿ, ಯುವ ಸ್ಪಂದನಾ ಕೇಂದ್ರ ಎಸ್.ಬಿ.ಶಿಲ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ.ಕಾಲೇಜಿನ ಪ್ರಾಚಾರ್ಯ ಡಾ. ಕೆ.ಟಿ.ನಾಗರಾಜನಾಯ್ಕ ವಹಿಸಿದ್ದರು. ಕ.ರಾ.ವಿ.ಪ.ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಸ್ವಾಗತಿಸಿದರು, ಕು. ಕೃಷ್ಣವೇಣಿ ವಂದಿಸಿದರು.