
ತಾಳಿಕೋಟೆ:ಮಾ.6: ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ಅವರು ನೀಡಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿ ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ತಾಲೂಕಾಡಳಿತ ವತಿಯಿಂದ ತಹಶಿಲ್ದಾರ ಕಾರ್ಯಾಲಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ ಸಮಯದಲ್ಲಿ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಕಲಿಯುಗದಲ್ಲಿ ಮಾನವನು ಆಸೆ, ಅಸೂಯೆಗಳನ್ನು ತೊಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕಬೇಕು. ಧರ್ಮವನ್ನು ರಕ್ಷಣೆ ಮಾಡುವವರು ನಾವು, ಆದರೆ ಧರ್ಮವೆ ನಮ್ಮನ್ನು ರಕ್ಷಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ, ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ವೀರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ), ರಾಜಶೇಖರ ಹಿರೇಮಠ, ಸಂಗಯ್ಯ ಹಿರೇಮಠ, ವೀರೇಶ ಡೋಣೂರಮಠ, ಕಾಶಿನಾಥ ಹಿರೇಮಠ ಆಯ್.ಎಂ.ಹಿರೇಮಠ, ಸಮಾಜ ಬಾಂದವರು ಇದ್ದರು.