ಜಗದ್ಗುರು ಶ್ರೀ ಮೌನೇಶ್ವರರು ಮಾನವ ಉದ್ಧಾರಕ್ಕಾಗಿ ಜನಿಸಿದ ಶ್ರೇಷ್ಠ ಸಂತರು: ಕೃಷ್ಣ ಪಂಚಾಳ್

(ಸಂಜೆವಾಣಿ ವಾರ್ತೆ)
ಹುಮನಾಬಾದ:ಡಿ.30: ಜಾತಿ ಮತಗಳ ಭೇದವನ್ನು ಕಳೆದು ಸರ್ವಧರ್ಮಗಳ ಸಮನ್ವಯಕಾರಾರಿ ಜಗದ್ಗುರು ಶ್ರೀ ಮೌನೇಶ್ವರರು ಮಾನವ ಜನಾಂಗದ ಉದ್ಧಾರಕ್ಕಾಗಿ ಜನಿಸಿದ ಶ್ರೇಷ್ಠ ಸಂತರು ಎಂದು ಮಂದಿರದ ಅರ್ಚಕ ಕೃಷ್ಣ ಅವರು ನುಡಿದರು.
ತಾಲೂಕಿನ ಮೀನಕೇರಾ ಗ್ರಾಮದ ಜಗದ್ಗುರು ಮೌನೇಶ್ವರ ಹಿರೋಡೇಶ್ವರ ಮಂದಿರದಲ್ಲಿ ಮಂಗಳವಾರ ಹೊಸ್ತಿಲ ಹುಣ್ಣಿಮೆಯ ದಿನ ಜಗದ್ಗುರು ಜಯಂತೋತ್ಸವ ನಿಮಿತ್ತವಾಗಿ ವಿಶೇಷ ಪೂಜಾಭಿಷೇಕ, ಮಹಾಮಂಗಳಾರತಿ ನಂತರ ನಡೆದÀ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಮೌನೇಶ್ವರರು ಹಿಂದು ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿ ಸಗರ ನಾಡಿನ ತಿಂಥಣಿ, ವರವಿ ದೇವರ ಗೋನಾಲ, ಕಾಶಿ, ತಿರುಪತಿ, ಶ್ರೀಶೈಲ ಮುಂತಾದ ಕಡೆಗಳಲ್ಲಿ ಅಸಂಖ್ಯ ಪವಾಡಗಳನ್ನು ಮಾಡಿ ಕೊಟ್ಯಾಂತರ ಭಕ್ತರ ಆರಾಧ್ಯದೈವರಾಗಿದ್ದರು.
ತಮ್ಮ ವಚನ ಸಾಹಿತ್ಯದ ಮೂಲಕ ಅಜ್ಞಾನದಲ್ಲಿದ್ದ ಸಮಾಜವನ್ನು ಸುಜ್ಞಾನದ ಬೆಳಕನ್ನು ಚೆಲ್ಲಿದರು. ಮೀನಕೇರಾ ಗ್ರಾಮದ ಜಗದ್ಗುರು ಮೌನೇಶ್ವರ ಮಂದಿರವು ಯಾದಗಿರಿಯ ಮಠದ ಗುರುನಾಥೇಂದ್ರ ಸರಸ್ವತಿ ಹಾಗೂ ಶಹಾಪೂರ ಮಠದ ದೇವೇಂದ್ರ ಮಹಾಸ್ವಾಮಿಗಳ ಕೃಪಾರ್ಶೀವಾದಗಳಿಂದ ಸದಾ ನಾನಾ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಸುಪ್ರಭಾತ, ವಿಶ್ವಕರ್ಮ ಧರ್ಮ ಧ್ವಜಾರೋಹಣ, ಜಗದ್ಗುರು ಮೌನೇಶ್ವರ, ಹಿರೋಡೇಶ್ವರ (ನರಸಿಂಹ) ದೇವರಿಗೆ ವಿಶೇಷ ವೇದೋಕ್ತ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಜರುಗಿತು.