ಜಗದ್ಗುರು ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ.


ಸಂಜೆವಾಣಿ ವಾರ್ತೆ
ಗಂಗಾವತಿ:ಎ,16- ಶೃಂಗೇರಿ ಪೀಠದ 36ನೇಯ ಪೀಠಾಧಿಕಾರಿಗಳಾದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 74ನೇಯ ವರ್ಧಂತಿ ಮಹೋತ್ಸವ ನಗರದ ಶಂಕರಮಠದಲ್ಲಿ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿಯಿಂದ ಜರುಗಿತು.
 ಈ ಸಂದರ್ಭದಲ್ಲಿ ಮಹಾಸ್ವಾಮಿಗಳವರ ಸನ್ಯಾಸತ್ವ ಪಡೆದ ಸುವರ್ಣ ಮಹೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಕ್ಕೆ ಹಿಂದುಳಿದ ಮಹಿಳೆಯಾದ ಲಕ್ಷ್ಮೀ ಅವರಿಗೆ ಮಾಂಗಲ್ಯವನ್ನು ಕಲ್ಪಿಸುವುದರ ಮೂಲಕ ಧರ್ಮದರ್ಶಿ ನಾರಾಯಣರಾವ್ ವೈದ್ಯ ಧರ್ಮ ಸಭೆಗೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಶೃಂಗೇರಿಯ ಉಭಯ ಜಗದ್ಗುರುಗಳ ಆಶಯದಂತೆ ಧರ್ಮಜಾಗೃತಿಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು 2024ರ ವರ್ಷಪೂರ್ತಿ ಆಚರಿಸುತ್ತಾ ಬರಲಾಗಿದ್ದು, ಇಂದು ವರ್ಧಂತಿ ಮಹೋತ್ಸವದ ಪ್ರಯುಕ್ತವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾವಂತ ಮಹಿಳೆಯ ವಿವಾಹಕ್ಕಾಗಿ ಮಾಂಗಲ್ಯ ಸರವನ್ನು ಶ್ರೀಮಠದ ವತಿಯಿಂದ ಕಲ್ಪಿಸಲಾಗಿದ್ದು, ಅತ್ಯಂತ ಸಂತಸದಾಯಕವಾಗಿದೆ. ಇದೇರೀತಿ ಹಂತಹಂತವಾಗಿ ಸಮಾಜದಲ್ಲಿರುವ ಎಲ್ಲಾ ಬಡವರ್ಗದ ಜನತೆಗಾಗಿ ಹೊಲಿಗೆ ಯಂತ್ರಗಳ ವಿತರಣೆ, ಸಸಿ ಹಂಚುವಿಕೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶುಲ್ಕ ಪಾವತಿ, ಲ್ಯಾಪ್‍ಟಾಪ್ ವಿತರಣೆ, ಗೋ-ಸಂರಕ್ಷಣೆಗಾಗಿ ಮೇವು ಹಂಚಿಕೆ ಸೇರಿದಂತೆ ಮತ್ತಿತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಶ್ರೀಮಠದ ಹಿರಿಯ ಸದಸ್ಯ ಶ್ರೀಪಾದರಾವ್ ಮುಧೋಳಕರ್ ಗಂಗಾವತಿಯಲ್ಲಿ ಶಂಕರಮಠ ಬೆಳೆದುಬಂದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇದಕ್ಕೂ ಪೂರ್ವದಲ್ಲಿ ಶೃಂಗೇರಿ ಮಠದ ಆಜ್ಞಾನುಸಾರವಾಗಿ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಭಟ್ ನೆರವೇರಿಸಿದರು. ಶ್ರೀ ಶಾರದಾಂಬೆ ಸೇರಿದಂತೆ ಪರಿವಾರ ದೇವರುಗಳಿಗೆ ಹಾಗೂ ಗುರುಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಇತರೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
 ಹಾಗೆಯೇ ಫಲಾನುಭವಿಯ ಪೋಷಕರಾದ ಹನುಮಂತಿ ದಂಪತಿಗಳಿಗೆ ಆತ್ಮೀಯವಾಗಿ ಗೌರವಿಸಿ ಆಶೀರ್ವದಿಸಲಾಯಿತು. ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ, ಸತ್ಯದೇವ ಭಜನಾ ಮಂಡಳಿ, ಗಂಗಾಧರೇಶ್ವರ ಭಜನಾ ಮಂಡಳಿ ಸೇರಿದಂತೆ ಇತರ ಭಜನಾ ಮಂಡಳಿಯ ಸದಸ್ಯರಿಂದ ಕಲ್ಯಾಣ ವೃಷ್ಠಿ ಸ್ತವ, ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಮತ್ತು ಲಕ್ಷ್ಮೀನರಸಿಂಹ ಕರುಣಾಸರ ಸ್ತೋತ್ರಗಳ ಪಾರಾಯಣ, ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು.
 ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ವೇಣುಗೋಪಾಲ್, ಶೇಷಗಿರಿ ಗಡಾದ್, ಜಗನ್ನಾಥ ಅಳವಂಡಿಕರ್, ಶಂಕರ ಹೊಸಳ್ಳಿ, ಬೇವಿನಾಳ ಪ್ರಲ್ಹಾದ ಆಚಾರ್, ಕಾಶೀನಾಥ ಭಟ್ ಇತರರು ಪಾಲ್ಗೊಂಡಿದ್ದರು.