ಜಗದ್ಗುರು ರೇಣುಕಾಚಾರ್ಯರ ಹೆಸರಿನಲ್ಲಿ ಪ್ರಶಸ್ತಿ: ಸಚಿವ ಸುನೀಲಕುಮಾರ್ ಭರವಸೆ

ಕಲಬುರಗಿ:ಫೆ.28: ಜಗದ್ಗುರು ರೇಣುಕಾಚಾರ್ಯರ ಹೆಸರಿನ ಮೇಲೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ನಾಡಿನ ಸಾಧಕರಿಗೆ ಪ್ರಶಸ್ತಿ ನೀಡುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಇಂಧನ ಸಚಿವ ವಿ. ಸುನೀಲಕುಮಾರ್ ಅವರು ಭರವಸೆ ನೀಡಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಅವರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಆಚರಣೆಗೆ ಆದೇಶ ಮಾಡಲಾಗಿದ್ದು, ಅದೇ ರೀತಿಯಾಗಿ ಜಯಂತ್ಯೋತ್ಸವ ದಿನದಂದು ಪ್ರತಿ ವರ್ಷ ನಾಡಿನ ಓರ್ವ ಸಾಧಕರಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರಶಸ್ತಿ ನೀಡುವದು ಸಮಂಜಸವಾಗಿದ್ದು, ಆ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಈಗಾಗಲೇ ಸಮಾಜ ಸುಧಾರಕರ, ಪುಣ್ಯ ಪುರುಷರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದ್ದು, ಅದೇ ರೀತಿಯಾಗಿ ಮನುಕುಲದ ಒಳಿತಿಗಾಗಿ ಸದ್ಭಾವನೆ ಪಥ ತೋರಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಅತ್ಯಗತ್ಯವಾಗಿದ್ದು ರಾಜ್ಯ ಸರ್ಕಾರದ ವತಿಯಿಂದ ಪ್ರಶಸ್ತಿ ನೀಡುವಂತೆ ನಾಗಲಿಂಗಯ್ಯ ಮಠಪತಿಯವರು ಸಚಿವರ ಗಮನಕ್ಕೆ ತಂದರು.