ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಗೆ ಮುಖ್ಯಮಂತ್ರಿಗಳಿಗೆ ಒತ್ತಾಯ

ಕಲಬುರಗಿ,ಫೆ.26: ಬೇಡ ಜಂಗಮರ ಪ್ರಮಾಣಪತ್ರ ನೀಡುವಂತೆ ಹಾಗೂ ನಗರದಲ್ಲಿ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಭಾನುವಾರ ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆಯ ಅಧ್ಯಕ್ಷ ಡಾ. ಸಂಪತ್ ಜೆ. ಹಿರೇಮಠ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕಳೆದ ಹಲವಾರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬಿ.ಡಿ. ಹಿರೇಮಠ್ ಅವರ ನೇತೃತ್ವದಲ್ಲಿ ಸತ್ಯಪ್ರತಿಪಾದನಾ ಸತ್ಯಾಗ್ರಹ ಮುಂದುವರೆದಿದೆ. ಆದಾಗ್ಯೂ, ಕರ್ನಾಟಕ ಸರ್ಕಾರವು ಆ ಕುರಿತು ಗಮನಹರಿಸದೇ ಕಾಳ ಕಳೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ಆದ್ದರಿಂದ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನ್ನಿಸಿಕೊಂಡಿರುವ ಕಲಬುರ್ಗಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗ್ ಹಿರೇಮಠ್, ಮಂಜು ಮಠಪತಿ (ಕುಸನೂರು), ವಿಜಯಲಕ್ಷ್ಮೀ ಹಿರೇಮಠ್, ಅಂಬರೀಷ್ ಮಠಪತಿ, ಸಿದ್ದಲಿಂಗಯ್ಯ ಮಠ್, ಶ್ರೀಕಾಂತ್ ಹಿರೇಮಠ್, ವೀರೇಶ್ ವೀರಣಗುಡಿ, ನಾಗಯ್ಯ ಮಠಪತಿ ಮುಂತಾದವರು ಉಪಸ್ಥಿತರಿದ್ದರು.