
ಬಾದಾಮಿ,ಮಾ7: ಇದೇ ಮೊದಲ ಬಾರಿಗೆ ರಾಜ್ಯ ಸರಕಾರದ ವತಿಯಿಂದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸುತ್ತಿದ್ದು, ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ ಹೇಳಿದರು.
ಅವರು ಪಟ್ಟಣದ ತಹಶೀಲದಾರ ಕಚೇರಿಯಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ತಹಶೀಲದಾರ ಜೆ.ಬಿ.ಮಜ್ಜಗಿ ಮಾತನಾಡಿ ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮನಿ ಎಂಬ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದು, ಭಾರತದಾದ್ಯಂತ ಲಕ್ಷಾಂತರ ಭಕ್ತರ ಸಮೂಹವಿದೆ. ಈ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಎಸ್.ಎಂ.ಹಿರೇಮಠ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಸುನೀಲ ಕಾರುಡಗಿಮಠ, ಶಿವಯ್ಯ ಹಿರೇಮಠ, ಉಮೇಶ ಭಿಕ್ಷಾವತಿಮಠ, ಶಿವಮೂರ್ತೆಯ್ಯ ಹಿರೇಮಠ, ಕುಮಾರ ಸೇರಿದಂತೆ ಜಂಗಮ ಸಮಾಜದ ಮುಖಂಡರು, ತಹಶೀಲದಾರ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.