ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವಕ್ಕೆ ಮಾ. 20ರಂದು ಚಾಲನೆ

ಕಲಬುರಗಿ:ಮಾ.18: ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಮಾರ್ಚ್ 20ರಿಂದ ಕಾರ್ಯಕ್ರಮ ಆರಂಭಗೊಳ್ಳಲಿವೆ ಎಂದು ಸಮಿತಿಯ ಗೌರವಾಧ್ಯಕ್ಷ ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 20,21 ಹಾಗೂ 22ರಂದು ಒಟ್ಟು ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. 21ರಂದು ರೇಣುಕಾಚಾರ್ಯರ ಸಮಾಜೋಧಾರ್ಮಿಕ ಕೊಡುಗೆಗಳ ಕುರಿತು ಭೆಮಳಖೇಡ, ಗೋರ್ಟಾದ ಡಾ. ರಾಜಶೇಖರ ಶಿವಾಚಾರ್ಯರು ಉಪನ್ಯಾಸ ನೀಡುವರು. ಉಪನ್ಯಾಸ ಕಾರ್ಯಕ್ರಮಕ್ಕೆ ನಾಡಿನ ಎಲ್ಲ ಭಕ್ತವೃಂದವು ಪಾಲ್ಗೊಳ್ಳಬೇಕು ಎಂದರು.
ಮಾರ್ಚ್ 22ರಂದು ಸಂಜೆ 6 ಗಂಟೆಗೆ ಉಜ್ಜೈನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ನಗರಕ್ಕೆ ಆಗಮಿಸುವರು. ಅವರಿಂದಾಗಿ ಇಡೀ ಕಾರ್ಯಕ್ರಮದ ಮೆರಗು ಹೆಚ್ಚುತ್ತದೆ. ಅಂದು ಜಗತ್ ವೃತ್ತದಲ್ಲಿನ ಬಸವ ಮಂಟಪದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದು ಅವರು ಹೇಳಿದರು.
ಮಾರ್ಚ್ 23ರಂದು ಬೆಳಿಗ್ಗೆ 8 ಗಂಟೆಗೆ ನಗರದ ಹಳೆಯ ಚೌಕ್ ಪೋಲಿಸ್ ಠಾಣೆ (ಕಿರಾಣಾ ಬಜಾರ್)ದಿಂದ 8 ಅಡಿ ಎತ್ತರದ ಕಂಚಿನ ಮೂರ್ತಿಯೊಂದಿಗೆ 1008 ಕುಂಭ ಮೇಳ, ಸಾಂಸ್ಕøತಿಕ ಕಾರ್ಯಕ್ರಮಗಳಾದ ವೀರಗಾಸೆ, ಡೊಳ್ಳು ಕುಣಿತ, ನಾಸಿಕಜಾನ್, ಭಜನಾ ಮಂಡಳಿ ಸೇರಿದಂತೆ ಜಗದ್ಗುರು ರೇಣುಕಾಚಾರ್ಯರ ಜಯಘೋಷಗಳೊಂದಿಗೆ ಅಪರಾಹ್ನ 12-30ಕ್ಕೆ ಎಸ್.ಎಂ. ಪಂಡಿತ್ ರಂಗಮಂದಿರದವರೆಗೆ ಮೆರವಣಿಗೆ ಆಗಮಿಸಲಿದೆ. ನಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳೂ ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ರಾಚೋಟಯ್ಯ ಹಿರೇಮಠ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಹಿರೇಮಠ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ, ಬಸವ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರವಿ ಬಿರಾದಾರ್, ಸಮಿತಿಯ ಕಾರ್ಯಾಧ್ಯಕ್ಷ ವೀರುಸ್ವಾಮಿ ನರೋಣಾ ಮುಂತಾದವರು ಉಪಸ್ಥಿತರಿದ್ದರು.