ಜಗದ್ಗುರುವಿನ ಸ್ಥಾನದಲ್ಲಿ ಭಾರತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.13: ಷೋಡಶ ಸಂಸ್ಕಾರಗಳ ಮೂಲಕ ಶಿಕ್ಷಣವನ್ನು ಭಾರತದಲ್ಲಿ ನೀಡಲಾಗುತ್ತಿತ್ತು. ಗುರುಕುಲಗಳು ಮತ್ತು ಆಗಿನ ವಿಶ್ವವಿದ್ಯಾಲಯಗಳಲ್ಲಿ ಎಲ್ಲ ದೇಶಗಳ ವಿದ್ಯಾರ್ಥಿಗಳು ಭಾರತದಲ್ಲಿ ಅದ್ಯಯನ ಮಾಡುತ್ತಿದ್ದರು. ಆದುದರಿಂದ ಭಾರತ ಜಗದ್ಗುರುವಿನ ಸ್ಥಾನದಲ್ಲಿತ್ತು ಎಂದು ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರಿನ ರಾಜ್ಯ ಕಾರ್ಯದರ್ಶಿಗಳಾದ ಬಸವರಾಜ್ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಗುರುತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಪ್ರಶಿಕ್ಷಣ ಭಾರತಿ (ಶಿಕ್ಷಕರ ಪ್ರಶಿಕ್ಷಣ ಪ್ರಕಲ್ಪ) ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ, ಗೋಶಾಲೆ, ರಕ್ತದಾನ, ಶಿಕ್ಷಣ ವ್ಯವಸ್ಥೆ, ತಪಸ್, ಸಾಧನ, ಸಾಹಿತ್ಯ ಪ್ರಕಾಶನ ಮುಂತಾದ ಯೋಜನೆಗಳೊಂದಿಗೆ    ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವುದು ರಾಷ್ಟ್ರೋತ್ಥಾನ ಪರಿಷತ್‍ನ ಮುಖ್ಯ ಉದ್ದೇಶವಾಗಿದೆ ಎಂದರು. ಶಿಕ್ಷಣದ ಮುಖ್ಯ ಉದ್ದೇಶ ಜೀವನದ ಗುರಿ ಏನು ಎಂಬುದು ಅರಿವುದು, ಬದುಕು ನಿಭಾಯಿಸುವುದರೊಂದಿಗೆ ಆತ್ಮ ವಿಶ್ವಾಸ ಮತ್ತು ಬಂದಮುಕ್ತಿ ಪಡೆಯುವುದಾಗಿರುತ್ತದೆ. ಮಾನವ ಅನ್ನಮಯ, ಮನೋಮಯ, ಪ್ರಾಣಮಯ, ವಿಜ್ಞಾನಮಯ ಮತ್ತು ಆನಂದಮಯ ಎಂಬ  ಪಂಚಕೋಶಗಳಿಂದ ನಿರ್ಮಾಣವಾಗಿದ್ದು ಈ ಐದು ಕೋಶಗಳ ವಿಕಸನಕ್ಕಾಗಿ ಚಟುವಟಿಕೆಗಳಿವೆ. ಈಗ ರಾಷ್ಟ್ರೀಯ ಶಿಕ್ಷಣ ಯೋಜನೆಯಲ್ಲಿ ಕೂಡ ಇರುವಂತೆ ಶಿಕ್ಷಕರು ಈ ಚಟುವಟಿಕೆಗಳ ತರಬೇತಿ ಪಡೆದು ಅದನ್ನು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಉಪಯೋಗಿಸಬೇಕು ಎಂದು ಉದಾಹರಣೆಗಳ ಮೂಲಕ ವಿವರಿಸಿದರು. ಇದೇ ಸಂದರ್ಭದಲ್ಲಿ ಬಿ.ಐ.ಟಿ.ಎಂ ನ ಡಾ. ಹೇಮಂತ್ ರವರು ರಾಷ್ಟ್ರೀಯ ಶಿಕ್ಷಣ ಯೋಜನೆ ಬಗ್ಗೆ ವಿವರಿಸಿದರು. ಎ.ಎಸ್.ಎಂ ನ ನಿವೃತ್ತ ಪ್ರಾದ್ಯಾಪಕರಾದ ಡಾ.ಶಶಿಕಿರಣ್‍ರವರು ಮಾತನಾಡಿ ಜಗತ್ತಿನ ಚಲನೆಯ ದೃತಿಗತಿಗಳನ್ನು ಸಾಂಕೇತಿಸುವ ನಟರಾಜ ಮೂರ್ತಿ ಜಿ.20 ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿದೆ ಎಂದರು. ಭಾರತದ ಕೌಟಲ್ಯನ ಅರ್ಥಶಾಸ್ತ್ರ, ಚರಕ, ಶುಶೃತ, ವಿಶ್ವಾಮಿತ್ರ ಶಸ್ತ್ರ, ವಶಿಷ್ಠನ ಶಾಸ್ತ್ರ ಮುಂತಾದವರು ಅಂದಿಗೇ ದೇವಕಣಗಳ ಸಂಶೋಧನೆ ಮಾಡಿದ್ದಾರೆ ಎಂದು ತಿಳಿಸಿದರು.ಸಂಜೆವಾಣಿ
ಜಗದೀಶ್ ಗುರೂಜಿ ಯವರು ಭಾರತದ ಭೂಪಟ ಪರಿಚಯ ಮಾಡಿಕೊಡುತ್ತಾ ಭಾರತ ಮೂರು ಭರತರು ಭಕ್ತಿ, ಪರಾಕ್ರಮ ಮತ್ತು ಸರ್ವಸಂಗ ಪರಿತ್ಯಾಗ ಮಾಡಿದವರು ಆಳಿದ, ಮಾತೃ ಸ್ವರೂಪದ ಈ ಭೂದೇಶದ ರಾಜಕೀಯ, ಭೌಗೋಳಿಕ ಅಲ್ಲದೆ ಸಾಂಸ್ಕ್ರತಿಕ ಭೂಪಟವನ್ನು ಮತ್ತು ಹನ್ನೆರಡು ಜ್ಯೋರ್ತಿಲಿಂಗಗಳು ಅರವತ್ತೆರಡು ಶಕ್ತಿಪೀಠಗಳು, ಪರ್ವತಗಳು ನದಿಗಳ ಒಟ್ಟಾರೆ ಚಿತ್ರಣವನ್ನು ವಿವರಿಸಿದರು. ಪ್ರಾಸ್ತಾವಿಕ ನುಡಿಯನ್ನು ಚಂದ್ರಶೇಖರವರು ನಡೆಸಿಕೊಟ್ಟರು. 
ಕಾರ್ಯಕ್ರಮದಲ್ಲಿ ಎಸ್.ಜಿ.ಟಿ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎನ್.ರುದ್ರಪ್ಪನವರು,  ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಜಿ.ತಿಪ್ಪೇರುದ್ರರವರು, ಎಸ್.ಜಿ.ಟಿ ಶಾಲೆಯ ನಿರ್ದೇಶಕರಾದ ಜಿ.ಮಂಜುಳ, ಎಲ್ಲಾ ಶಿಕ್ಷಕರು ಹಾಜರಿದ್ದರು.
 ವಂದನಾರ್ಪಣೆಯನ್ನು ಎಸ್.ಜಿ.ಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್ ರವರು, ಪ್ರಾರ್ಥನೆಯನ್ನು  ನಾಗರತ್ನ ಮತ್ತು ತಂಡ  ನಡೆಸಿಕೊಟ್ಟರು.  ನಿರೂಪಣೆಯನ್ನು ಸೌಮ್ಯರವರು ನಿರ್ವಹಿಸಿದರು.