ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಫಿಕ್ಸ್
ದಾವಣಗೆರೆ.ಏ.೧೬: ಜಗದೀಶ್ ಶೆಟ್ಟರ್ ನಮ್ಮ ಬೀಗರು, ಅವರನ್ನು ನಮ್ಮ ಮಗ ಪಕ್ಷಕ್ಕೆ ಕರೆಯುತ್ತಾನೆ, ಅವರು ಕಾಂಗ್ರೆಸ್‌ಗೆ ಬಂದರೆ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಫಿಕ್ಸ್ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದರು.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ಬೀಗರು, ನಾನು, ಅವರು ಪಕ್ಷಕ್ಕೆ ಬರುವಂತೆ ಅವರ ಕಡೆ ಮಾತನಾಡಿಲ್ಲ. ಆದ್ರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಬಹುದು, ಬಿಜೆಪಿಯವರು ಇಂತಹ ಕೆಲಸ ಮಾಡಿ ಎಲ್ಲವನ್ನು ಕಳೆದುಕೊಳ್ಳುತ್ತಾರೆ, ಬಿಜೆಪಿಗೆ ರಾಜ್ಯದಲ್ಲಿ ೬೦ ಸೀಟ್ ಕೂಡ ಬರೋಲ್ಲ ಎಂದು ಭವಿಷ್ಯ ನುಡಿದರು.ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾವು ಅವರಿಗೆ ಟಿಕೆಟ್ ಕೊಡಲೇಬೇಕಾಗುತ್ತದೆ. ಟಿಕೆಟ್ ಕೊಟ್ಟರೆ ಅವರು ಕಾಂಗ್ರೆಸ್ ಸೇರೋದು ಪಕ್ಕಾ, ಕಾಂಗ್ರೆಸ್‌ಗೆ ಅವರು ಬರೋದು ಕೂಡ ಪಕ್ಕಾ, ಆದ್ದರಿಂದ ನಮ್ಮ ಮಗ ಬೀಗರು ಕಾಂಗ್ರೆಸ್‌ಗೆ ಬರುವಂತೆ ಅವರ ಬಳಿ ಮಾತನಾಡುತ್ತಾ ಇದ್ದಾರೆ, ಕಾದು ನೋಡೋಣ ಎಂದರು. ಇದಲ್ಲದೆ ಜಗದೀಶ್ ಶೆಟ್ಟರ್ ಅವರೊಂದಿಗೆ ನಮ್ಮ ಕಾಂಗ್ರೆಸ್ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಲಿಂಗಾಯತ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ಗೆ ಬರುತ್ತಿದ್ದಾರೆ, ಮುಂದೆ ಏನಾಗುತ್ತೋ ಕಾಯ್ದು ನೋಡೋಣ, ರಾಜ್ಯದಲ್ಲಿ ಕಾಂಗ್ರೆಸ್ ಬಂಪರ್ ಹೊಡಿಯಲಿದೆ ಎಂದರು.