ಜಗತ್ತಿನ ಮಹಾನ್ ವಿದ್ವಾಂಸ ಡಾ.ಅಂಬೇಡ್ಕರ್: ನಿಜಲಿಂಗ ದೊಡ್ಮನಿ

ಕಲಬುರಗಿ,ಏ.15: ಜಗತ್ತಿನ ಬಹುತೇಕ ರಾಷ್ರ್ಟಗಳು ಬಾಬಾ ಸಾಹೇಬರ ಜಯಂತಿಯನ್ನು ವಿಶ್ವದ ಜ್ಞಾನದ ಸಂಕೇತವಾಗಿ ಆಚರಿಸುತ್ತಿವೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.

ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಬಾಬಾ ಸಾಹೇಬರ ಜಯಂತಿಯನ್ನು ವಿಶ್ವದ ಬಹುತೇಕ ಕಡೆ ಆಚರಣೆ ಮಾಡಲಾಗುತ್ತಿದೆ. ಒಬ್ಬ ಮಹಾನ್ ನಾಯಕನಾದವನು ಇಡೀ ವಿಶ್ವಕ್ಕೆ ಪರಿಚಯವಾಗುತ್ತಾನೆ ಎಂಬುವುದಕ್ಕೆ ಬಾಬಾ ಸಾಹೇಬರೇ ಉದಾಹರಣೆಯಾಗಿದ್ದಾರೆ. ಅವರ ಚಿಂತನೆಗಳ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ. ಈ ದೇಶದ ಬಹುತೇಕ ಜನರಿಗೆ ಶಿಕ್ಷಣ ಸಾಮಾಜಿಕ ಹಕ್ಕುಗಳು ದೊರೆತಿರುವುದು ಡಾ.ಅಂಬೇಡ್ಕರ್ ಅವರ ಚಿಂತನೆಗಳಿಂದ ಎಂದರೆ ತಪ್ಪಾಗಲಾರದು.

ವಿಶ್ವದ ವಿವಿಧ ಸಂವಿಧಾನವನ್ನು ಅರಿತುಕೊಂಡ ಬಾಬಾ ಸಾಹೇಬರು ಈ ದೇಶದ ಅಸಂಖ್ಯಾತ ಜನರಿಗೆ ನ್ಯಾಯ ಕೊಡಿಸುವ ಸಂವಿಧಾನ ನೀಡಿದ್ದಾರೆ ಎಂದರು.
ಮಹಿಳೆಯರ ಹಕ್ಕುಗಳನ್ನು ಕೊಡಿಸಲು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಈ ದೇಶದಲ್ಲಿ ಅಷ್ರ್ಪಶ್ಯರನ್ನು ಕೀಳಾಗಿ ಕಾಣಲಾಗುತ್ತಿತ್ತು. ಈ ಕಾರಣಕ್ಕಾಗಿ ಬಾಬಾ ಸಾಹೇಬರು ಸಂವಿಧಾನದಲ್ಲಿ ದಮನಿತರಿಗೆ ಹಕ್ಕುಗಳನ್ನು ನೀಡಿದರು ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಗುರಣ್ಣ ಐನಾಪುರˌ ಮಲ್ಲಿಕಾರ್ಜುನ ಬರ್ಮಾˌ ಗೊಲ್ಲಾಳಪ್ಪ ಗೆಜ್ಜಿˌ ಅಶೋಕ ಬಡಿಗೇರˌ ರಾಜು ಗಂಗಾಕರ್ˌ ಶಂಕರಲಿಂಗಯ್ಯ ಸುಭೇದಾರˌ ಮಲ್ಲಯ್ಯ ಹಿರೇಮಠˌ ಸಿದ್ದಣ್ಣ ನಾಯ್ಕೊಡಿˌ ನಿಂಗಣ್ಣ ಮ್ಯಾಗೇರಿˌ ಸಂತೋಷ ಮಾಣಶಿವಣಗಿˌ ವಿಠ್ಠಲ್ ಚೌಡಕಿ ಸೇರಿದಂತೆ ಇತರರು ಇದ್ಡರು.