ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.24. ಜಗತ್ತಿನಲ್ಲಿ ಅತಿದೊಡ್ಡ ಆಯುಧವೆಂದರೆ ಅದು ಶಿಕ್ಷಣ ಮಾತ್ರ. ಈ ಶಿಕ್ಷಣವೆಂಬ ಆಯುಧವನ್ನು ಹಿಡಿದು ಮಹಿಳೆ ಮುಂದೆ ಬರಬೇಕು ಎಂದು ಸಹಶಿಕ್ಷಕಿ ಶ್ರೀಮತಿ ಅಂಜಿನಮ್ಮ.ಎಚ್ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೂ.22 ರಂದು ಸಮೀಪದ ಮುದ್ದಟನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ತೆರೆದಮನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆಲ ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ಕೊನೆಯಾದರೆ, ಕೆಲವರಿಗೆ ಪ್ರೌಢಶಿಕ್ಷಣದ ಹಂತಕ್ಕೆ ಕೊನೆಯಾಗುತ್ತಿದೆ. ಹೆಣ್ಣುಮಗಳು ದೊಡ್ಡವಳಾದರೇ ಅವಳ ಓದನ್ನು ಅಲ್ಲಿಗೇ ನಿಲ್ಲಿಸುವ ಪದ್ದತಿ ಇನ್ನೂ ಇದೆ, ವಿದ್ಯಾರ್ಥಿನಿಯರು ಈ ಅನಿಷ್ಟ ಪದ್ದತಿಯನ್ನು ಮೆಟ್ಟಿನಿಂತು ಓದಿ ಮುಂದೆ ಬರಬೇಕು. ತೊಟ್ಟಿಲನ್ನು ತೂಗುವ ಕೈ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಲ್ಲದೆಂದು ಈಗಾಗಲೇ ಕೆಲ ಮಹಿಳಾ ಮಣಿಗಳು ಸಾಭೀತು ಮಾಡಿದ್ದಾರೆ. ಮಹಿಳೆಯರು ಇಲ್ಲದಿರುವ ಕ್ಷೇತ್ರವೇ ಇಲ್ಲ. ಆಟೋ ಚಾಲಕಿಯಿಂದ ಗಗನಸಖಿಯವರೆಗೆ ಸಾಧನೆ ತೋರಿದ್ದಾರೆ. ಹೆಣ್ಣುಮಕ್ಕಳು ಕಷ್ಟಪಟ್ಟು ಶ್ರದ್ದೆಯಿಂದ ಓದಿ ಮುಂದೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ನಂತರ ಪೋಲಿಸ್ ಇಲಾಖೆಯ ಸಿರಿಗೇರಿ ಪೋಲಿಸ್ ಠಾಣೆ ಎಎಸ್‍ಐ ರಮಣಕುಮಾರ್ ಮಾತನಾಡಿ ಮಕ್ಕಳ ಶಿಕ್ಷಣದ ಕುರಿತು, ಮಕ್ಕಳಿಗೆ ಸಮಸ್ಯೆಯಾದಾಗ ಸಹಾಯಕ್ಕೆ ಬರುವ ಇಲಾಖೆಗಳ ಕುರಿತು, 14ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸಿದರೆ ಪೋಷಕರ ಮತ್ತು ದುಡಿಸಿಕೊಳ್ಳುವವರ ಮೇಲೆ ನಡೆಯುವ ಕಾನೂನು ಕ್ರಮಗಳ ಕುರಿತು, ಮಕ್ಕಳ ಸಹಾಯಕ್ಕೆ ಶಾಲೆಯಲ್ಲಿನ ದೂರು ಪೆಟ್ಟಿಗೆಗಳಲ್ಲಿ ಸಮಸ್ಯೆ ಬರೆದು ಹಾಕುವ ಕುರಿತು ಮಾಹಿತಿ ನೀಡಿದರು. ಶಿಕ್ಷಕಿ ಬೀಬೀಪಾತಿಮಾ ಸ್ವಾಗತ ಕೋರಿದರು, ಶಿಕ್ಷಕ ಚಿದಾನಂದಪ್ಪ ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸಬಿಯಾಬಾನು ನಡೆಸಿಕೊಟ್ಟರು. ಸಹಶಿಕ್ಷಕರಾದ ಲಕ್ಷ್ಮಣ, ರವಿಚಂದ್ರ, ಈರಮ್ಮ, ಕಲ್ಲಮ್ಮ, ಪಿಸಿ ಅಕ್ಬರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.