ಜಗತ್ತಿನೆದುರು ಭಾರತದ ಶಕ್ತಿ ಸಾಬೀತು

ನವದೆಹಲಿ,ಸೆ.೨೪- ಚಂದ್ರಯಾನ -೩ ರ ಯಶಸ್ಸಿನ ನಂತರ, ಜಿ-೨೦ ರ ಶೃಂಗಸಭೆ ಯಶಸ್ಸು ಪ್ರತಿಯೊಬ್ಬ ಭಾರತೀಯನ ಸಂತೋಷ ದ್ವಿಗುಣಗೊಳಿಸಿದೆ. ಈ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ-೨೦ಯ ಪೂರ್ಣ ಸದಸ್ಯರನ್ನಾಗಿ ಮಾಡುವ ಮೂಲಕ ಭಾರತ ತನ್ನ ನಾಯಕತ್ವ ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.ಶೃಂಗಸಭೆಯಲ್ಲಿ ಪ್ರಸ್ತಾಪಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ನೂರಾರು ವರ್ಷಗಳವರೆಗೆ ವಿಶ್ವ ವ್ಯಾಪಾರದ ಆಧಾರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆಕಾಶವಾಣಿಯ ಮನ್ ಕಿ ಬಾತ್ ಸರಣಿಯ ೧೦೫ ನೇ ಸಂಚಿಕೆಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿ ಭಾರತದ ಶಕ್ತಿ ಸಾಮರ್ಥ್ಯ ಮತ್ತು ನಾಯಕತ್ವವನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ ಎಂದಿದ್ದಾರೆ.ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯ ಸಂದರ್ಭದಲ್ಲಿ ಅನೇಕ ವಿಶ್ವ ನಾಯಕರು ಬಾಪುಗೆ ಶ್ರದ್ಧಾಂಜಲಿ ಸಲ್ಲಿಸಲು ಒಟ್ಟಿಗೆ ರಾಜ್‌ಘಾಟ್ ತಲುಪಿದ ದೃಶ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಬಾಪು ಅವರ ಚಿಂತನೆಗಳು ಪ್ರಪಂಚದಾದ್ಯಂತ ಇಂದಿಗೂ ಎಷ್ಟು ಪ್ರಸ್ತುತವಾಗಿವೆ ಎಂಬುದಕ್ಕೆ ಇದು ದೊಡ್ಡ ಪುರಾವೆಯಾಗಿದೆ ಎಂದಿದ್ದಾರೆ.ರಾಜಸ್ಥಾನದಲ್ಲಿ ಸುಖದೇವ್ ಅವರ ಟೀಮ್ ಕೋಬ್ರಾ ಮತ್ತು ಚೆನ್ನೈನಲ್ಲಿ ಆಟೋ ಚಾಲಕ ಎಂ. ರಾಜೇಂದ್ರ ಪ್ರಸಾದ್ ಅವರಂತಹ ವಿವಿಧ ವ್ಯಕ್ತಿಗಳು ಮತ್ತು ಗುಂಪುಗಳು ಹಾವು ಮತ್ತು ಪಾರಿವಾಳಗಳು ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಮತ್ತು ಕಾಳಜಿ ವಹಿಸಲು ಸ್ಪೂರ್ತಿದಾಯಕ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆ ಜನಭಾಗಿದರಿಗೆ ಉದಾಹರಣೆ ಯಾಗಿದೆ. ಸೋಟ್ ನದಿ ಪುನರುಜ್ಜೀವನಗೊಳಿಸಲು ೭೦ ಹಳ್ಳಿಗಳು ಒಗ್ಗೂಡಿದವು. ಜನರು ನದಿ ದಡದಲ್ಲಿ ೧೦,೦೦೦ ಬಿದಿರು ಸಸಿಗಳನ್ನು ನೆಟ್ಟಿದ್ದಾರೆ. ಇಂತಹ ಪ್ರಯತ್ನ ದೇಶಾದ್ಯಂತ ಹೆಚ್ಚು ಹೆಚ್ಚು ಆಗಬೇಕಾಗಿದೆ ಎಂದಿದ್ದಾರೆ.
ದೇಶದಲ್ಲಿ ಶಿಕ್ಷಣವನ್ನು ಸೇವೆಯಾಗಿ ನೋಡಲಾಗುತ್ತದೆ. ನೈನಿತಾಲ್ ಜಿಲ್ಲೆಯ ಯುವಕರು ಮಕ್ಕಳಿಗಾಗಿ ವಿಶಿಷ್ಟವಾದ ‘ಘೋಡಾ ಗ್ರಂಥಾಲಯ’ವನ್ನು ಪ್ರಾರಂಭಿಸಿದ್ದಾರೆ. ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಪುಸ್ತಕಗಳು ಮಕ್ಕಳನ್ನು ತಲುಪುತ್ತಿವೆ ಮತ್ತು ಈ ಸೇವೆ ಸಂಪೂರ್ಣ ಉಚಿತವಾಗಿದೆ ಎಂದು ಶ್ಲಾಘಿಸಿದ್ದಾರೆ.
ಹೈದರಾಬಾದ್‌ನ ೧೧ ವರ್ಷದ ಆಕರ್ಷನಾ ಅವರು ಮಕ್ಕಳಿಗಾಗಿ ಏಳು ಗ್ರಂಥಾಲಯ ನಿರ್ವಹಿಸುತ್ತಿದ್ದಾರೆ. ಅವರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕೊಡುಗೆ ನೀಡುತ್ತಿರುವ ರೀತಿ ಸ್ಪೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ತವ್ಯದ ಕಾಲ:
ಆಜಾದಿ ಕಾ ಅಮೃತ್ ಕಾಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ‘ಕರ್ತವ್ಯ ಕಾಲ’ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೃತ ಕಾಲದಲ್ಲಿ ಭಾರತ ಮುಂದಿನ ೨೫ ವರ್ಷಗಳ ಗುರಿಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಪ್ರತಿಯೊಬ್ಬರ ಕೊಡುಗೆ ಅಪಾರ ಎಂದು ತಿಳಿಸಿದ್ದಾರೆ.

ಹೊಯ್ಸಳ ದೇವಾಲಯ ಸೇರ್ಪಡೆ ಸಂತಸ:
ಕರ್ನಾಟಕದ ಹೊಯ್ಸಳ ದೇವಾಲಯಗಳಿಗೆ ಸಂಬಂಧಿಸಿದ ದೇವಾಲಯಗಳು ಮತ್ತು ಗುರುದೇವ್ ರವೀಂದ್ರನಾಥ ಠಾಗೋರ್ ಶಾಂತಿನಿಕೇತನ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲಾಗಿದೆ ಇದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸುವುದು ಭಾರತದ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.