ಜಗತ್ತಿನಲ್ಲಿ ಭಾರತವು ಈರುಳ್ಳಿ ಉತ್ಪಾದನೆಯಲ್ಲಿ ಎರಡನೇಯ ಸ್ಥಾನದಲ್ಲಿ: ಡಾ.ಆರ್.ಬಿ.ಬೆಳ್ಳಿ

ವಿಜಯಪುರ, ಜೂ.8-ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಈರುಳ್ಳಿ ಸಮಗ್ರ ಬೇಸಾಯ ಕ್ರಮಗಳು ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮ ತರಬೇತಿಯನ್ನು ಆಯೋಜಿಸಲಾಗಿತ್ತು.
ಡಾ.ಆರ್.ಬಿ.ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಜಯಪುರ. ಇವರು ಈ ಕಾರ್ಯಕ್ರಮಕ್ಕೆ ಪ್ರಸ್ತಾವನೆ ನೀಡಿ ಮಾತನಾಡಿ ಜಗತ್ತಿನಲ್ಲಿ ಭಾರತವು ಈರುಳ್ಳಿ ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಎರಡನೇಯ ಸ್ಥಾನದಲ್ಲಿದೆ ಮತ್ತು 22.43 ಮಿ.ಟನ್. ನಷ್ಟು ಈರುಳ್ಳಿ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಅದರಲ್ಲಿ, ಶೇ. ಮೂರನೇಯ ಒಂದು ಭಾಗದಷ್ಟು ಉತ್ಪಾದನೆ ಮಹಾರಾಷ್ಟ್ರದಲ್ಲಿದೆ ಮತ್ತು ದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.20 ರಷ್ಟು ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ತೋಟಗಾರಿಕೆ ವಿಜ್ಞಾನಿಗಳಾದ ಶ್ರೀಮತಿ ಹೀನಾ ಎಂ.ಎಸ್. ಇವರು ಈರುಳ್ಳಿ ಬೆಳೆಯ ಸಮಗ್ರ ಬೇಸಾಯ ಕ್ರಮಗಳು ಕುರಿತು ಮಾತನಾಡುತ್ತಾ ಮುಂಗಾರು ಹಂಗಾಮಿ ಸೂಕ್ತವಾದ ಈರುಳ್ಳಿ ತಳಿಗಳೆಂದರೆ, ಬಸವಂತ-780, ಎನ್-53, ಆಗ್ರಿ ಫೌಂಡ್‍ಡಾರ್ಕ್‍ರೆಡ್, ಅರ್ಕಾಕಲ್ಯಾಣ್ ಮತ್ತು ಭೀಮಾ ಸೂಪರ್. ಬೀಜೋಪಚಾರ ಬಿತ್ತನೆ ಬೀಜವನ್ನು ಪಾದರಸ ಸಂಯುಕ್ತ ವಸ್ತು 2 ಗ್ರಾಂ ಅಥವಾ ಥೈರಮ್ 2.5 ಗ್ರಾಂ ಅಥವಾ ಕ್ಯಾಪ್ಟಾನ್ 2.0 ಗ್ರಾಂ ಅಥವಾ ಬಿನೋಮಿಲ್ 2 ಗ್ರಾಂ. ಒಂದು ಕೆ.ಜಿ. ಬೀಜಕ್ಕೆ ಉಪಚರಿಸುವುದರಿಂದ ನೇರಳೆ ಮಚ್ಚೆರೋಗ, ಕತ್ತುಕೊಳೆ ರೋಗ ಮುಂತಾದ ರೋಗ ಬಾಧೆಗಳು ನಿಯಂತ್ರಣವಾಗುತ್ತದೆ ಎಂದು ವಿವರಿಸಿದರು.
ಸಸಿ ಮಡಿ ತಯಾರಿಕೆಃ ಒಂದು ಹೆಕ್ಟೇರ್‍ಗೆ ಬೇಕಾಗುವ ಸಸಿಗಳನ್ನು ಬೆಳೆಯಲು 7.5 ಮೀ ಉದ್ದ 1.2 ಮೀ ಅಗಲ ಮತ್ತು 10 ಸೆಂ.ಮೀ ಎತ್ತರದ 25 ಮಡಿಗಳನ್ನು ತಯಾರಿಸಬೇಕು. ಬೀಜಗಳನ್ನು 7.5 ಸೆಂ.ಮೀ ಅಂತರದ ಸಾಲುಗಳಲ್ಲಿ ಬಿತ್ತಬೇಕು. ತಕ್ಷಣ ಮಡಿಗಳಿಗೆ ನೀರುಣಿಸಬೇಕು. ಹೀಗೆ ಮಾಡಿದ ಸಸಿಗಳು 6-8 ವಾರಗಳಲ್ಲಿ ನಾಟಿ ಮಾಡಲು ಸಿದ್ದವಾಗುತ್ತದೆ.
ನಾಟಿ ವಿಧಾನಃ ನಾಟಿ ಮಾಡುವಾಗ 1/3 ರಷ್ಟು ಮೇಲಿನ ಎಲೆಗಳನ್ನು ಚಿವುಟಬೇಕು. ಬೇರುಗಳನ್ನು ಶೇ.0.1 ರಷ್ಟು ಕಾರ್ಬಂಡೈಜಿಮ್ ಶಿಲೀಂಧ್ರ ನಾಶಕದ ದ್ರಾವಣದಲ್ಲಿ 2 ಗಂಟೆಗಳ ಕಾಲ ಅದ್ದಿ ನಾಟಿ ಮಾಡುವುದರಿಂದ ಶೀಲಿಂಧ್ರ ರೋಗಗಳ ಬಾಧೆ ಕಡಿಮೆ ಮಾಡಬಹುದು. ಸಸಿಗಳನ್ನು 15 ಸೆಂ.ಮಿ ಅಂತರದ ಸಾಲುಗಳಲ್ಲಿ 7.5-10 ಸೆಂ.ಮಿ ಗೆ ಒಂದರಂತೆ ನಾಟಿ ಮಾಡಬೇಕು.
ಕಳೆ ನಿರ್ವಹಣೆಃ ಬಿತ್ತನೆ ಮಾಡಿದ ಮೂರು ದಿನಗಳ ಒಳಗೆ ಆಕ್ಸಿಪ್ಲೋರೋಫಿನ್ 23.5 ಇ.ಸಿ. 10 ಮಿ.ಲೀ. 15 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಕಳೆನಾಶಕವನ್ನು ಸಿಂಪಡಿಸುವಾಗ ಸಾಕಷ್ಟು ತೇವಾಂಶವಿರಬೇಕು. ಈರುಳ್ಳಿಗೆ ಬರುವ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಡಾ. ಜಹೀರ ಅಹಮದ್, ವಿಜ್ಞಾನಿ (ಸಸ್ಯರೋಗ ಶಾಸ್ತ್ರ) ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-1 ಇವರು ಈರುಳ್ಳಿ ಕಾಡುವ ಪ್ರಮುಖ ರೋಗ ಮತ್ತು ಕೀಟಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಎಕರೆಗೆ ಒಂದು ಚೀಲ ಬೇವಿನ ಹಿಂಡಿ ಸೇರಿಸುವುದರಿಂದ ಸಾಕಷ್ಟು ಕೀಟ ಮತ್ತು ರೋಗಗಳ ಬಾಧೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಥ್ರಿಪ್ಸ ನುಶಿ ನಿರ್ವಹಣಾ ಕ್ರಮಗಳುಃ ಒಂದೇ ಹೊಲದಲ್ಲಿ ಉಳ್ಳಾಗಡ್ಡಿ ಅಥವಾ ಬಳ್ಳೊಳ್ಳಿ ನಂತರ ಅದೇ ಬೆಳೆ ಅಥವಾ ಈ ಕೀಟದ ಇತರೆ ಆಸರೆ ಬೆಳೆಗಳನ್ನು ಬೆಳೆಯಬೇಡಿ.
ತಾಕುಗಳ ಸುತ್ತಲೂ ಇರುವ ಕಾಡು ಗಿಡಗಳನ್ನು, ಹುಲ್ಲು, ಒಣ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸುಡುವುದರಿಂದ ಕೀಟದ ಕೋಶಗಳನ್ನು ನಾಶ ಪಡಿಸಬಹುದು.
ಬೆಳೆಗೆ ಸಾಕಷ್ಟು ನೀರನ್ನು ಹಾಯಿಸುವುದರಿಂದ ಈ ಕೀಟದ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಹೊಲದ ಸುತ್ತಲೂ ಮುಂಗಾರಿನಲ್ಲಿ 4 ಸಾಲು ಮೆಕ್ಕೆಜೋಳವನ್ನು ಮತ್ತು ಹಿಂಗಾರಿನಲ್ಲಿ 4 ಸಾಲು ಗೋಧಿಯನ್ನು ಬೆಳೆಯಬೇಕು. ಇದರಿಂದ ನುಸಿಗಳ ಬಾಧೆ ಬರದಂತೆ ತಡೆಯಬಹುದು ಶಿಫಾರಸ್ಸಿಗಿಂತ ಹೆಚ್ಚಿನ ಸಾರಜನಕ ಗೂಬ್ಬರವನ್ನು ಉಪಯೋಗಿಸಬಾರದು. ಬಿತ್ತಿದ ಮೂರು ವಾರಗಳ ನಂತರ 1.7 ಮಿ.ಲೀ. ಡೈಮಿಥೋಯೆಟ್ 30 ಇ.ಸಿ. ಅಥವಾ 1.3ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ಪ್ರತಿ ಲೀ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. 6 ಮತ್ತು 9 ವಾರಗಳ ನಂತರ ಮೇಲೆ ತಿಳಿಸಿದ ಸಿಂಪರಣೆಯನ್ನು ಪುನರಾವರ್ತಿಸಬೇಕು.
ನೇರಳೆ ಎಲೆ ಮಚ್ಚೆ ರೋಗ ನಿರ್ವಹಣಾ ಕ್ರಮಗಳುಃ ಹೊಲಗಳಲ್ಲಿ ನೀರು ಬಸಿದು ಹೋಗುವಂತೆ ಮಾಡಬೇಕು, ಬೀಜಗಳನ್ನು ಥೈರಾಮ್ (2.5ಗ್ರಾಂ ಪ್ರತಿ ಕಿ.ಗ್ರಾಂಗೆ) ಶಿಲೀಂಧ್ರ ನಾಶಕದಿಂದ ಉಪಚರಿಸಬೇಕು, ಮ್ಯಾಕೋಜೆಬ್ 2.5ಗ್ರಾಂ ಮತ್ತು ಹೆಕ್ಸಾಕೋನಾಜೋಲ 1 ಗ್ರಾಂ/ ಲೀ. ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ 2 ಸಿಂಪರಣೆ ಮಾಡಬೇಕು ಅಥವಾ ಸ್ಕೋರ್ 1 ಮಿ.ಲೀ. ಪ್ರತಿ ಲೀಟರ ನೀರಿಗೆ ಅಥವಾ ಅಮಿಸ್ಟಾರ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿರಿ.
ಪ್ರದೀಪ ದೊಡ್ಡವಾಡ ವಿಜಯಪುರ ಈ ಆನ್‍ಲೈನ್ ತರಬೇತಿ ಕುರಿತು ಶ್ಲಾಘಿಸಿದರು, ಇನ್ನು ಇಂತಹ ಅನೇಕ ತರಬೇತಿಗಳಲ್ಲಿ ಆಯೋಜಿಸಲು ತಿಳಿಸಿದರು. ಅದೇ ರೀತಿ ತರಬೇತಿಯಲ್ಲಿ ಭಾಗವಹಿಸಿದ ರೈತರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ವಿಜ್ಞಾನಿಗಳ ಜೊತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಕಾರ್ಯಕ್ರಮದಲ್ಲಿ 45 ಕ್ಕಿಂತ ಹೆಚ್ಚಿನ ಜನ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು. ಡಾ. ಆರ್.ಬಿ. ನೆಗಳೂರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಇಂಡಿ ಇವರು ಎಲ್ಲರಿಗೂ ವಂದಿಸಿದರು.