ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.2: ಜಗತ್ತಿನಲ್ಲಿ ಪುಸ್ತಕಗಳೇ ಶಾಶ್ವತ ಹೊರತು, ಮನುಷ್ಯನಲ್ಲ, ತಲತಲಾಂತರಗಳಿಂದ ಬಂದ ಜ್ಞಾನವನ್ನು ಪುಸ್ತಕ, ಮುಂದಿನ ಪೀಳಿಗೆಗೆ ಪಸರಿಸುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಲಲಿತ ಕಲಾ ನಿಕಾಯದ ಡೀನ್ ಡಾ.ಕೆ ಸಿ ಶಿವಾರೆಡ್ಡಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು, ಮಾತನಾಡಿ ಸಮಾಜದಲ್ಲಿ ಎದೆಯುಬ್ಬಿಸಿಕೊಂಡಿರುವ ವೃತ್ತಿ ಎಂದರೆ ಅದು ಕೃಷಿ ರೈತನ ಮಗನಾದ ನಾನು ಗ್ರಾಮೀಣ ಭಾಗದಿಂದ ಬಂದು ಕನ್ನಡದ ಕೆಲಸ ಮಾಡಿದ್ದೇನೆ. ಅದೇ ಕನ್ನಡಕ್ಕಿರುವ ಶಕ್ತಿ. ಕನ್ನಡವೇ ಉಸಿರು, ಕನ್ನಡವೇ ಜೀವನವೆಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಬಹಳ ಪ್ರೀತಿಯಿಂದ ಕನ್ನಡದ ಕೆಲಸ ಮಾಡಿದ್ದೇನೆ ಎಂದರು.
ಭಾಷಾಂತರ ವಿಭಾಗದ ಮುಖ್ಯಸ್ಥ ಡಾ.ಎ ಮೋಹನ್ ಕುಂಟಾರ್ ಮಾತನಾಡಿ, ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಕೊಡುಗೆ ಅಮೂಲ್ಯವಾದದ್ದು. ಆದರೆ ಸಿಬ್ಬಂದಿಗಳ ನಿವೃತ್ತಿ ಸಂದರ್ಭದಲ್ಲಿ ಅವರ ಸೇವೆ ಹಾಗೂ ಕೊಡುಗೆ ಪ್ರಮುಖವಾಗುತ್ತದೆ ಇಂತಹ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಡಾ. ಕೆ.ಸಿ ಶಿವಾರೆಡ್ಡಿ, ಡಾ.ಸಿದ್ದಗಂಗಮ್ಮ, ಡಿ ಪರಮೇಶ್ವರಪ್ಪ ಅವರ ಕೊಡುಗೆ ಮಹತ್ವದಾದದ್ದು ಎಂದು ನುಡಿದರು.
ಅಭಿವೃದ್ಧಿ ಅಧ್ಯಯನ ವಿಭಾಗದ ಡಾ.ಸಿದ್ದಗಂಗಮ್ಮ ಅವರ ಕುರಿತು ಮಾತನಾಡಿದ ಡಾ.ಎ. ಶ್ರೀಧರ, ಡಿ.ಪರಮೇಶ್ವರಪ್ಪ ಕುರಿತು ಮಾಹಿತಿ ಕೇಂದ್ರದ ಉಪನಿರ್ದೇಶಕ ಡಾ.ಡಿ.ಮೀನಾಕ್ಷಿ ಅವರು ಕಾರ್ಯiವೈಖರಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಕೆಲಸ ಮಾಡುವ ವಾತಾವರಣದಲ್ಲಿ ಹಿಂದೆ ಮುಂದೆ ಮಾತನಾಡಿಕೊಳ್ಳುವ ಜನರೇ ಹೆಚ್ಚು, ಅಂತಹವರ ಭಾವನೆಗಳಿಗೆ ಬಲಿಯಾಗಿ ನಮ್ಮ ಮುಂದಿನ ದಿನಗಳನ್ನು ಮರೆಯುತ್ತಿದ್ದೇವೆ. ಇಂತಹ ವಿಷಯಗಳಿಗೆ ಗಮನಹರಿಸದೆ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಕೆಲಸ ಮಾಡಬೇಕು, ಕೆಲವರು ಖಾಯಂ ಆಗುವವರೆಗೂ ಕೆಲಸ ಮಾಡುತ್ತಾರೆ ಖಾಯಂ ಆದ ಮೂರೇ ತಿಂಗಳಿನಲ್ಲಿ ಮಾನಸಿಕವಾಗಿ ನಿವೃತ್ತರಾಗಿರುತ್ತಾರೆ. ಆದರೆ ಡಾ.ಕೆ.ಸಿ ಶಿವಾರೆಡ್ದಿ, ಡಾ.ಸಿದ್ದಗಂಗಮ್ಮ, ಡಿ.ಪರಮೇಶ್ವರಪ್ಪ ಸದಾ ಕಾಲವು ಹಸನ್ಮುಖಿಯಾಗಿ ತುಂಬಾ ಶೃದ್ಧೆಯಿಂದ ಮತ್ತು ಆಸಕ್ತಿಯಿಂದ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.
ಸಂಗೀತ ವಿಭಾಗದ ವಿದ್ಯಾರ್ಥಿ ಭರತ್ ಗುಂಡಿ ಪ್ರಾರ್ಥಿಸಿದರು, ಉಪಕುಲಸಚಿವ ಡಾ. ಎ ವೆಂಕಟೇಶ ಸ್ವಾಗತಿಸಿದರು, ಸಹಾಯಕ ಕುಲಸಚಿವ ಗುರಬಸಪ್ಪ ನಿರೂಪಿಸಿದರು.