ಜಗತ್ತಿನಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾದದ್ದು: ಡಾ. ಐ.ಎಸ್. ವಿದ್ಯಾಸಾಗರ

ಕಲಬುರಗಿ:ನ.27: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ರವರು ಮಾತನಾಡುತ್ತಾ ಜಗತ್ತಿನಲ್ಲಿ ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದೆ. ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲಾ ನಾಗರಿಕರಿಗೆ ಸಮಾನವಾದ ಅವಕಾಶಗಳನ್ನು ಸಂವಿಧಾನವು ನೀಡಿದೆ. ಹೀಗಾಗಿ ಯಾವುದೇ ವ್ಯಕ್ತಿ ತನ್ನ ಸಾಮಥ್ರ್ಯದ ಆಧಾರದ ಮೇಲೆ ಜಾತಿ ಮತ ಎಂಬ ಬೇಧ ಭಾವ ವಿಲ್ಲದೆ ತನಗಿಷ್ಟವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಇಂತಹ ಸಂವಿಧಾನವನ್ನು ನೀಡುವಲ್ಲಿ ಕಾರಣರಾದ ಹಾಗೂ ಸಂವಿಧಾನದ ಪಿತಾಮಹಾರಾದ ಡಾ. ಅಂಬೇಡ್ಕರರವರನ್ನು ನಾವೇಲ್ಲರು ಪೂಜಿಸಬೇಕು ಎಂದು ನುಡಿದರು.
ಇನ್ನೊರ್ವ ಅತಿಥಿಗಳಾದ ಬರಹಗಾರರಾದ ವಿಠ್ಠಲ ವಗ್ಗನ ಇವರು ಮಾತನಾಡಿ ಬಾಬಾ ಸಾಹೇಬ ಅಂಬೇಡ್ಕರರವರನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಆರಾಧಿಸುತ್ತಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ ಅವರನ್ನು ಕುರಿತಾದ 22 ಸಂಪುಟಗಳನ್ನು ಸೆಂಟಜಾನ ವಿಶ್ವವಿದ್ಯಾಲಯದವರು ಚೀನಿ ಭಾಷೆಗೆ ಭಾಷಾಂತರ ಮಾಡಿ ಚೀನಾದಲ್ಲಿ ಅಂಬೇಡ್ಕರ ರವರ ಕುರಿತಾದ ಅಧ್ಯಯನ ನಡೆಸುತ್ತಿದ್ದಾರೆ. ದುರಾದೃಷ್ಠವೆಂದರೆ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ಕುರಿತಾದ ಆಳವಾದ ಅಧ್ಯಯನದ ಪುಸ್ತಕಗಳನ್ನು ಯಾವುದೇ ಶಾಲೆಯಲ್ಲಾಗಲಿ ಅಥವಾ ಮಹಾವಿದ್ಯಾಲಯಗಳಾಗಲಿ ಬೋಧಿಸುತ್ತಿಲ್ಲ. ಇಂದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಮಾನತೆ ಸಿಗಬೇಕಾದರೆ ಅಂಬೇಡ್ಕರವರು ನೀಡಿದ ಸಂವಿಧಾನವೇ ಕಾರಣವೆಂದು ನುಡಿದರು. ಆದರೆ ಇಂದು ಇಂತಹ ಸಂವಿಧಾನವನ್ನು ನಾಶಮಾಡುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆಯೇ ವಿನಹ ಅದರಲ್ಲಿ ಇರುವ ಅಂಶಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆಯವರು ಸಂವಿಧಾನದ ವಿಚಾರಗಳನ್ನು ಇಂದು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಬೇಕು ಆಗ ಮಾತ್ರ ಅಂಬೇಡ್ಕರವರ ಪ್ರಯತ್ನ ಫಲನೀಡಿದಂತಾಗುತ್ತದೆ ಎಂದು ನುಡಿದರು.
ವೇದಿಕೆಯ ಮೇಲೆ ಕೆಪಿಇ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಚಂದ್ರಶೇಖರ ಶಿಲವಂತ ಪ್ರಾಚಾರ್ಯಾರಾದ ಪ್ರೊ. ಗಿರೀಶ ಮೀಶಿ, ಡಾ. ನಿರ್ಮಲಾ ಸೀರಗಾಪೂರ ಹಾಗೂ ಕಾರ್ಯಕ್ರಮದಲ್ಲಿ ಡಾ. ಹರ್ಷವರ್ಧನ ಡಾ. ಶರಣಪ್ಪ ಕಟ್ಟಿ ಡಾ. ಸುರೇಶ ಹೊಸಮನಿ, ಪ್ರೋ. ಕವಿರಾಜ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಕಾರ್ಯಾಕ್ರಮವನ್ನು ಡಾ. ಗಾಂಧೀಜಿ ಮೋಳಕೆರೆ ನಿರೂಪಿಸಿದರು. ಪ್ರಾಚಾರ್ಯಾರಾದ ಪ್ರೊ. ಗಿರೀಶ ಮೀಶಿ ಸ್ವಾಗತಿಸಿದರು. ಡಾ. ಶರಣಪ್ಪ ಕಟ್ಟಿ ವಂದಿಸಿದರು.