
ದಾವಣಗೆರೆ. ಮೇ.೨೧: ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಇದ್ದು, ಜಗತ್ತನ್ನೇ ಸೃಷ್ಟಿಸಿದ ಇತಿಹಾಸಗಳು ಇವೆ. ಅಲ್ಲದೆ ಎಲ್ಲಾ ಸಮಾಜಕ್ಕೂ ನಾಗರಿಕತೆ, ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟ ಯಾವುದಾದರೂ ಸಮಾಜ ಎಂದರೆ ಅದು ವಿಶ್ವಕರ್ಮ ಸಮಾಜ ಎಂದು ಸಮಾಜದ ಮುಖಂಡ ಅಖಂಡೇಶ್ವರ ಎಂ.ಪತ್ತಾರ್ ತಿಳಿಸಿದರು.ವಿಶ್ವಕರ್ಮ ಸಮಾಜ ದಾವಣಗೆರೆ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಜಗತ್ತನ್ನು ಸೃಷ್ಟಿಸುವುದು ಮಾತ್ರವಲ್ಲ. ಇಡೀ ಜಗತ್ತಿಗೆ ನಾಗರಿಕತೆ, ಸಂಸ್ಕೃತಿ, ಸಂಸ್ಕಾರ, ಕಲಿಸಿಕೊಟ್ಟ ನಮ್ಮ ವಿಶ್ವಕರ್ಮ ಸಮಾಜ ಇಂದು ಸಂಘಟನೆಯಿಂದ ದೂರವಾಗಿದೆ. ಈ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ ಎಂದರು.ವಿಶ್ವಕರ್ಮ ಸಮಾಜವು ಪಂಚ ಕಸುಬುಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದೇವೆ. ಆದರೆ, ನಮ್ಮಲ್ಲಿ ನಾಯಕತ್ವ ಮತ್ತು ಸಂಘಟನೆಯ ಕೊರತೆಗೆ ನಾವುಗಳು ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ದುರ್ಬಲರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ತನ್ನ ಜತೆ ಕರೆದುಕೊಂಡು ಹೋಗುವ ಸಮಾಜವೆಂದರೆ ಅದು ವಿಶ್ವಕರ್ಮ. ಸಮಾಜ ಯಾರೊಂದಿಗೂ ಜಗಳವಾಡದೆ ಎಲ್ಲರೂ ತನ್ನನ್ನು ತನ್ನ ಸಮುದಾಯ ಎಂದು ಕಾಣುವ ಸಮುದಾಯ ವಿಶ್ವಕರ್ಮ ಸಮಾಜ. ಆದರೆ ನಮ್ಮಲ್ಲೇ ಸಂಘಟನೆಗಳು ಹೆಚ್ಚಾಗಿ ಸಮಾಜದಿಂದ ವಿಮುಖವಾಗಿವೆ. ಕಾರಣ ಎಲ್ಲರೂ ಒಗ್ಗಟ್ಟಾಗಿ ಒಂದೇ ವೇದಿಕೆ ಅಡಿಯಲ್ಲಿ ಬಂದು ಸಮಾಜದ ಅಭಿವೃದ್ಧಿಯತ್ತ ಸಮಾಜ ಸಂಘಟನೆತ್ತ ಕಾರ್ಯೋನ್ಮುಖರಾಗ ಬೇಕಾಗಿದೆ ಎಂದು ಕರೆ ನೀಡಿದರು.ನಾವುಗಳು ಒಗ್ಗಟ್ಟಾದರೆ ಮಾತ್ರ ನಮಗೆ ಸರ್ಕಾರ ನಮಗೆ ಸೌಲಭ್ಯವನ್ನು ನೀಡುತ್ತದೆ. ಇಲ್ಲವಾದರೆ ನಮಗೆ ಯಾವುದು ಸವಲತ್ತುಗಳು ಸಿಗುವುದಿಲ್ಲ. ನಮ್ಮ ನಮ್ಮಲ್ಲೇ ನಾವು ಬೇಧ ಭಾವ ಮಾಡಿಕೊಂಡು ಒಂದೊಂದು ದಿಕ್ಕಿಗೆ ಹೋಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಅನಗೂಡಿನ ಅಂತರವಳ್ಳಿ ಶಾಖಾ ಮಠದ ಶ್ರೀ ಭಾಸ್ಕರ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ ನಾಗೇಂದ್ರಚಾರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜವಳಿ ವರ್ತಕ ಬಿ.ಸಿ.ಉಮಾಪತಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಮುರುಗೇಶ್, ಬಿ.ಎಲ್.ಸೀತಾರಾಮಚಾರ್, ಬಿ.ವಿ.ಶಿವಾನಂದ್, ಎನ್. ಪೂರ್ವಾಚಾರ್ಯ, ಜಿ.ಪಿ.ಜಗನ್ನಾಥ, ರಾಕೇಶ್ ಜಾಧವ್, ಕೆ.ಪಿ.ಪರಮೇಶ್ವರಪ್ಪ, ಹೆಚ್.ಓ.ವಿರುಪಾಕ್ಷಾಚಾರ್, ಎಸ್.ರುದ್ರಾಚಾರ, ಎಸ್.ತಿಪ್ಪೇಸ್ವಾಮಿ, ಶಾಂತಾಚಾರ್, ನಾಗರಾಜಚಾರ್, ಗುರುಸಿದ್ದಚಾರ್, ವೀರಾಚಾರ್ ಇತರರು ಇದ್ದರು.