ಜಗತ್ತಿಗೆ ಕಾಯಕದ ಮಹತ್ವವನ್ನು ತಿಳಿಸಿದವರು ವಿಶ್ವಗುರು ಬಸವಣ್ಣ


ಸಂಜೆವಾಣಿ ವಾರ್ತೆ
ಸಂಡೂರು:ಜು: 25:  ಜಗತ್ತಿಗೆ ಕಾರ್ಮಿಕ ಶಕ್ತಿಯ ಮಹತ್ವವನ್ನು ತಿಳಿಸಿಕೊಟ್ಟವರು 12ನೇ ಶತಮಾನದ ಬಸವಣ್ಣನವರು, ಅವರು ಸಾರಿದ ಕಾಯಕವೇ ಕೈಲಾಸ ತತ್ವ ಬಹಳಷ್ಟು ಅಂಶಗಳನ್ನು ಒಳಗೊಂಡಂತಹ ತತ್ವವಾಗಿದೆ, ಪ್ರತಿಯೊಬ್ಬ ವ್ಯಕ್ತಿಯೂ ಸಹ ಕಾಯಕ ಮಾಡುವುದರಿಂದ ಮಾತ್ರ ಕೈಲಾಸ ಪಡೆಯಲು ಸಾಧ್ಯ ಎಂದು ಉಪನ್ಯಾಸಕ ಬಸವರಾಜ ಬಣಕಾರ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆ( ಎ.ಪಿ.ಎಂ.ಸಿ.) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶ್ರೀಮತಿ ಕೆ.ಎಸ್. ಅನ್ನಪೂರ್ಣಮ್ಮ ಸಂಗಪ್ಪ ದತ್ತಿ ಹಾಗೂ ಶ್ರೀಮತಿ ಶಿವಮ್ಮ ವೀರಭದ್ರಪ್ಪ ಗಾಣಿಗರ ದತ್ತಿ ಉಪನ್ಯಾಸದಲ್ಲಿ ವಿಶ್ವಮಾನವ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ ಕಾಯಕ ಎಲ್ಲಾ ಕಾರ್ಯಕ್ಕಿಂತಲೂ ಸಹ ಬಹು ಮುಖ್ಯವಾದುದು, ವಚನದಲ್ಲಿ ಹೇಳುವಂತೆ ಕಾಯಕದಲ್ಲಿ ನಿರತವಾದರೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯದೊಳಗು, ಎಂದು ಶಿವನ್ನನ್ನು ಸಹ ಕಾಯಕದಲ್ಲಿಯೇ ಕಾಣುವಂತಹ ಮಹತ್ತರ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ, ಅದ್ದರಿಂದ ಶ್ರಮಗೌರವ ಬಹು ಮುಖ್ಯವಾದುದು, ಪ್ರತಿಯೊಂದು ಕೆಲಸವೂ ಸಹ ಮೇಲು ಕೀಳಲ್ಲ ಎಲ್ಲವೂ ಸಮಾನ, ಅದು ಸತ್ಯ, ಶುದ್ದ ವಾಗಿರಬೇಕು ಅದರಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯ, ಅಂತಹ ಸತ್ಯ ಶುದ್ದ ಕಾಯಕವನ್ನು ಪ್ರತಿಯೊಬ್ಬ ಶರಣರೂ ಮಾಡುತ್ತಿದ್ದರೂ, ಅದಕ್ಕೆ ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡ ಹೆಚ್ಚಿನ ಅಕ್ಕಿಯನ್ನು ತಂದಾಗ ತಿರಸ್ಕರಿಸಿದ ರೀತಿ ಇಂದಿನ ಸಮಾಜಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ, ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ, ನಿಮ್ಮ ಪುರಾತನರಾಣೆ, ತಲೆ ದಂಡ, ತಲೆದಂಡ ಎನ್ನುವ ವಚನ ಕಾಯಕದಲ್ಲಿ ಭಿನ್ನತೆ ಬೇಡ ಎಂದಿದ್ದಾರೆ ಅದ್ದರಿಂದ ಪ್ರತಿಯೊಬ್ಬರೂ ಸಹ ಕೆಲಸ ಮಾಡುವ ಮೂಲಕವೇ ದೇವರನ್ನು ಕಾಣಬೇಕು ಎನ್ನುವುದು ಬಹು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರುಗಳಾದ ಹೆಚ್.ಎನ್. ಬೋಸ್ಲೆ ಮಾತನಾಡಿ ಇಂದಿನ ನಮ್ಮ ನಡೆ, ನುಡಿ ಶುದ್ದವಾಗಿರಬೇಕು, ಗುರು, ಹಿರಿಯರಿಗೆ ಗೌರವಿಸುವಂತಹ ಗುಣ ಬೇಕು, ಅದಕ್ಕೆ ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತೆ, ಸ್ಪಟಿಕದ ಸಲಾಖೆಯಂತೆ,ಮಾಣಿಕ್ಯದ ದೀಪ್ತಿಯಂತೆ, ಲಿಂಗಮೆಚ್ಚಿ ಹೌದು ಎನ್ನುವಂತೆ ಮಾತನಾಡಬೇಕು, ಇನ್ನೋಬ್ಬರಿಗೆ ನೋವು ಕೊಡದಂತಹ, ಪ್ರತಿಯೊಬ್ಬರೂ ಸಮಾನತೆ ಸಮಾಜದಲ್ಲಿ ಬದುಕನ್ನು ನಡೆಸಬೇಕು ಎನ್ನುವ ಬಹುದೊಡ್ಡ ಸಂದೇಶವನ್ನು 12ನೇ ಶತಮಾನದ ಶರಣರು ನೀಡಿದ್ದಾರೆ, ಎಂದರು.
ಸಭೆಯಲ್ಲಿ ಅತಿಥಿಗಳಾಗಿ ಅಗಮಿಸಿದ ದೈಹಿಕ ಶಿಕ್ಷಕಿ ರೇಣುಕಮ್ಮ ಅವರು ಮಾತನಾಡಿ ಸಮಾನತೆಯಲ್ಲಿ 12ನೇ ಶತಮಾನದ ಶರಣರ ಕೊಡುಗೆ ಅಪಾರೆ, ಹೆಣ್ಣು ಗಂಡು ಎಂಬ ಭೇಧವಿಲ್ಲದೆ ಸಮಾನತೆಯನ್ನು ಸಾರಿದರು, ಇಂದು ನಾವು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿಯನ್ನು ಉಳಿಸುವಂತಹ ಮಹತ್ತರ ಕಾರ್ಯ ಮಾಡುತ್ತಿದೆ, ನಮ್ಮ ಮಕ್ಕಳಿಗೆ ಇಂತಹ ಉಪನ್ಯಾಸಗಳ ಮೂಲಕ ಕನ್ನಡ ಸಾಹಿತ್ಯವನ್ನು, ಭಾಷೆಯನ್ನು, ಗಡಿಯನ್ನು ತಿಳಿಸುವಂತಹ ಬಹುದೊಡ್ಡ ಕಾರ್ಯ ಇದಾಗಿದೆ ಎಂದರು.
ಎ.ಎಂ. ಶಿವಮೂರ್ತಿ, ಕನ್ನಡ ಶಿಕ್ಷಕಿ ರೇಣುಕ, ಶಿವಮೂರ್ತಿ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.