ಜಗತ್ತನ್ನು ನೋಡಿ ಜನಾರ್ಧನನನ್ನು ತಿಳಿಯಿರಿ

ಸತ್ತೂರು,ಫೆ19 : ಕಾಣದ ದೇವರು ಕಾಣಿಸಬೇಕಾದರೆ, ನೋಡದ ದೇವರನ್ನ ನೋಡ ಬೇಕಾದರೆ, ಜಗತ್ತಿನ ಕಾರಣಿಕರ್ತ, ಸೃಷ್ಟಿಕರ್ತನಾದ ಜನಾರ್ಧನನ ಜಡ ಪ್ರಪಂಚದಲ್ಲಿರುವ 84 ಲಕ್ಷ ಸೂಕ್ಷ್ಮಾತಿ ಸೂಕ್ಷ್ಮ ಜೀವರಾಶಿಗಳನ್ನು ನೋಡಿ ತಿಳಿಯಬೇಕು. ಭಗವಂತನ ವ್ಯಾಪ್ತತ್ವ, ನಿತ್ಯತ್ವ ಅವನಿಂದ ನಿಯಮಕರಾದ ಜೀವೋತ್ತಮನಾದ ವಾಯುದೇವರು ಹಾಗೂ ಇನ್ನೂಳಿದ ಪರಿವಾರ ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ ಮುಂತಾದ ದೇವತೆಗಳ ಮಹಿಮೆಗಳನ್ನು ತಿಳಿದರೆ, ದೇವರ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಪಂ. ಧ್ರುವಾಚಾರ್ಯ ಗಲಗಲಿಯವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿ ವೆಂಕಟೇಶ ಕುಲಕರ್ಣಿ ಅವರ ನಿವಾಸದಲ್ಲಿ ಜರುಗಿದ ಶ್ರೀಮದ್ ಭಗವದ್ಗೀತಾ ಅಷ್ಟಮೋಧ್ಯಾಯದಲ್ಲಿ ಭಾಗವಹಿಸಿ ಮಾತನಾಡಿದರು. ಭಗವಂತನ ಜ್ಞಾನ ಪಡೆಯಲಿಕ್ಕೆ ಸಾಧನೆ ಉಪಾಯಗಳಾದ ಕರ್ಮ, ಧರ್ಮ, ಧ್ಯಾನ , ಭಕ್ತಿ ಯೋಗಗಳನ್ನು ತಿಳಿಸುತ್ತಾ, ಪರಬ್ರಹ್ಮ ಯಾರು? ಅಧ್ಯಾತ್ಮ ಯಾವುದು ,ಕರ್ಮ ಯಾವುದು, ಬದುಕುವ ಬಗೆ ಮುಂತಾದ ವಿಷಯಗಳಾದ ನಮ್ಮೆಲ್ಲರ ಪ್ರತಿನಿಧಿಯಾದ ಅರ್ಜುನನಿಗೆ ಪರಮಾತ್ಮನು ಉಪದೇಶ ಮಾಡಿದ್ದಾನೆ ಎಂದರು.
ಇದಕ್ಕೂ ಪೂರ್ವ ಭೀಷ್ಮ ಆಚಾರ್ಯರ ಬಗ್ಗೆ ಮತ್ತು ಮಧ್ವಾಚಾರ್ಯರು ಮಾಡಿದ ತ್ಯಾಗ ಹಾಗೂ ನೀಡಿದ ಸಂದೇಶದ ಬಗ್ಗೆ ವಿವರಿಸಿದರು. ಮದ್ವನವಮಿಯ ನಿಮಿತ್ತ ಶ್ರೀ ಮದ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿ ಭಜನೆ, ಪಾರಾಯಣ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಗೋಪಾಲಚಾರ್ಯ ಹರಿಹರ, ಹನುಮಂತ ಪುರಾಣಿಕ, ಬದ್ರಿನಾಥ ಬೆಟಗೇರಿ, ಸಂಜೀವ ಗೋಳಸಂಗಿ, ಡಾ. ಶ್ರೀನಾಥ ಕೆ.ಎಂ, ಪ್ರಾಣೇಶ ಮಳಗಿ, ಎಸ್.ಎಂ ಜೋಶಿ, ಅಶೋಕ ಬಹದ್ದೂರ ದೇಸಾಯಿ, ಪ್ರಮೋದ ಸಿರುಗುಪ್ಪಿ, ಡಿ.ಕೆ ಜೋಶಿ, ಹನುಮಂತ ಬಿಜಾಪುರ, ಪೆÇ್ರ.ಸಿ. ಕೆ. ಕುಲಕರ್ಣಿ, ಸಂಜೀವ ಜೋಶಿ, ಪಾಂಡುರಂಗ ಕುಲಕರ್ಣಿ, ಜಯತೀರ್ಥ ನಿಲೋಗಲ, ವಿಲಾಸ್ ಸಬನೀಸ್ ಮುಂತಾದ ಕುಟುಂಬದವರು ಉಪಸ್ಥಿತರಿದ್ದರು.