ಜಗಜ್ಯೋತಿ ಬಸವೇಶ್ವರರೇ ಉತ್ತಮ ಆಡಳಿತಗಾರರಿಗೆ ಮಾದರಿ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಫೆ18 : ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಮರ್ಥ ಆಡಳಿತ ನಡೆಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ಜಗಜ್ಯೋತಿ ಬಸವಣ್ಣನವರೇ ಇಂದು ನಮಗೆಲ್ಲ ಉತ್ತಮ ಆಡಳಿತ ನಡೆಸುವುದಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಿ ಅವರು ಮಾತನಾಡಿದರು.
‘ಇಂದು ನಾವು ಸಂವಿಧಾನ ಜಾಗೃತಿ ಮಾಡುತ್ತಿದ್ದೇವೆ. ಬಸವಣ್ಣನವರ ಚಿಂತನೆಯ ಬಹುಪಾಲು ಈ ಸಂವಿಧಾನದಲ್ಲಿ ಅಡಕವಾಗಿರುವುದನ್ನು ನಾವು ಗಮನಿಸಬೇಕು.‘ಲೋಕದ ಡೊಂಕ ನೀವೇಕೆ ತಿದ್ದುವಿರಿ…’ ಎಂಬ ಸಾಲಿನಲ್ಲಿ ನಮ್ಮ ಆತ್ಮ ಸಾಕ್ಷಾತ್ಕಾರದ ದರ್ಶನ ಅಡಗಿದೆ’ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಹಿಟ್ನಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಿ.ಎಚ್.ಬಸವರಾಜ್‌, ಕರ್ನಾಟಕದ ಜನತೆ ಶ್ರಮಜೀವಿಗಳು ಎಂಬುದನ್ನು ಬಸವಣ್ಣ 900 ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಅದರ ಫಲವಾಗಿಯೇ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.
‘ಕಂದಾಚರಣೆ, ಜಾತಿಪದ್ಧತಿ, ಮಹಿಳೆಯರ ಕಡೆಗಣನೆಯಂತಹ ಅನಿಷ್ಠಗಳು ಆ ಕಾಲದಲ್ಲೂ ಇದ್ದವು. ಬಸವಣ್ಣ ಆಗ ಮಾಡಿದ ಒಂದೊಂದು ಕ್ರಾಂತಿಯ ಕತೆಯೂ ಅದ್ಭುತ ಮತ್ತು ಅಂದಿನ ಸಂದರ್ಭದಲ್ಲಿ ಪ್ರಬಲ ವಿರೋಧವನ್ನು ಮೆಟ್ಟಿ ನಿಂತ ಅವರ ಎದೆಗಾರಿಕೆ ಅಪ್ರತಿಮ. ಅವರು ಜಗತ್ತಿನ ಮೊದಲ ಸ್ತ್ರೀವಾದಿ. ಬಹುತೇಕ ಅನಕ್ಷರಸ್ಥರೇ ಇದ್ದ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ಚಕ್ರಗಳಿಗೆ ಅನುಸಾರ ಕನ್ನಡದ ಅಕ್ಷರಗಳನ್ನು ಅಳವಡಿಸಿ ಜನತೆಗೆ ಅಕ್ಷರಾಭ್ಯಾಸ ಮಾಡಿಸಿದ ರೀತಿಯೂ ಅಮೋಘ’ ಎಂದರು.
‘ಬುದ್ಧನಿಗೆ ಅಶೋಕನ ರಾಜಾಶ್ರಯ ಸಿಕ್ಕಿತ್ತು. ಅದರಂತೆ ಬಸವಣ್ಣನವರಿಗೆ ಸಮರ್ಥ ರಾಜಾಶ್ರಯ ಸಿಕ್ಕಿದ್ದೇ ಆಗಿದ್ದರೆ ಬಸವಣ್ಣನವರ ಚಿಂತನೆಗಳು ಜಗತ್ತಿನೆಲ್ಲೆಡೆ ಇಂದು ಪಸರಿಸಿಬಿಟ್ಟಿರುತ್ತಿತ್ತು. ಇಂದಿಗೂ ಸಹ ಬಸವಣ್ಣನವರ ಜಯಂತಿಯನ್ನು ಕಡೆಗಣಿಸುವ ಪ್ರಯತ್ನ ಸಾಗಿದೆ, ಇದರ ಹಿಂದೆ ಬಹುರಾಷ್ಟ್ರೀಯ ಕಂಪನಿಗಳು, ಕೆಲವು ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇರುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಂ ಷಾ, ತಹಶೀಲ್ಧಾರ್ ಶೃತಿ ಎಂ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಇದ್ದರು. ಮಲ್ಲಿಕಾರ್ಜುನ ಮತ್ತು  ತಂಡದವರ ಬಸವಣ್ಣನವರ ವಚನ ಗಾಯನ ಗಮನ ಸೆಳೆಯಿತು.
ಇದಕ್ಕೆ ಮೊದಲು ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಜಿಲ್ಲಾಡಳಿತ ಮತ್ತು ಸಮಾಜದ ಮುಖಂಡರಿಂದ ಮಾಲಾರ್ಪಣೆ ಮಾಡಲಾಯಿತು.
ವಚನಗಳು ಅನುಭವ ಸಾರಗಳು. ಅವುಗಳನ್ನು  ಕೇಳಿ ಬಿಡುವಂತದ್ದಲ್ಲ, ಜೀವನದಲ್ಲಿ ಪಾಲನೆ ಮಾಡಲೆಂದೇ ವಚನಗಳನ್ನು ರಚಿಸಲಾಗಿದೆ
ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ