ಜಗಜೀವನ್ ರಾಮ್ ಆದರ್ಶ ರಾಜಕಾರಣಿ ತಹಸೀಲ್ದಾರ್ ಬಿದರಿ ಅಭಿಮತ , ಸರಳವಾಗಿ ಜಯಂತಿ ಆಚರಣೆ

ದೇವದುಗ,ಏ.೦೬- ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಹಸಿರುಕ್ರಾಂತಿಗೆ ಮುನ್ನುಡಿ ಬರೆದ ಹರಿಕಾರ. ಪ್ರತಿಯೊಬ್ಬರಿಗೂ ಜಗಜೀವನ್ ರಾಮ್ ಜೀವನ ಮಾದರಿಯಾಗಿದ್ದು, ಅವರೊಬ್ಬ ಆದರ್ಶ ರಾಜಕಾರಣಿಯಾಗಿದ್ದರು ಎಂದು ತಹಸೀಲ್ದಾರ್ ಕೆ.ವೈ.ಬಿದರಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬುಧವಾರ ಮಾತನಾಡಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಜಗಜೀವನ್ ರಾಮ್, ಪರಿಶ್ರಮದ ಮೂಲಕವೇ ದೇಶದ ಅತ್ಯಂತ ಮಹತ್ವದ ಹುದ್ದೆ ಉಪಪ್ರಧಾನಿಯಾಗಿದ್ದರು ಎಂದರು.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಡಾ.ಬಾಬು ಜಗಜೀವನ್‌ರಾಮ್ ಹಸಿರುಕ್ರಾಂತಿಯ ಹರಿಕಾರ ಎಂದೇ ಗುರುತಿಸಿಕೊಂಡಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಹಸಿರು ಕ್ರಾಂತಿಗೆ ನಾಂದಿಹಾಡಿ ದೇಶದ ಆಹಾರ ಸಮಸ್ಯೆಗೆ ಪರಿಹಾರ ಒದಗಿಸಿದ್ದರು. ಅವರೊಬ್ಬರ ಆದರ್ಶ, ದೀಮಂತ ರಾಜಕಾರಣಿಯಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಶಿರಸ್ತೇದಾರ್ ಗೋವಿಂದ್, ನೌಕರರಾದ ಶರಣಬಸವ ಸ್ವಾಮಿ, ಅನೀಲ್‌ಕುಮಾರ, ರವಿಕುಮಾರ, ದೇವರಾಜ, ಶಾಂತಮಲ್ಲಯ್ಯ ಸ್ವಾಮಿ, ಮುಖಂಡರಾದ ಹನುಮಂತ ಮನ್ನಾಪುರ, ಭೀಮಣ್ಣ ನಾಯಕ, ಅಭಿಷೇಕ ಇತರರಿದ್ದರು.