ಜಗಜೀವನರಾಂ ಮಾರ್ಗದರ್ಶನ ಅವಶ್ಯ : ಚರಂತಿಮಠ

ಬಾಗಲಕೋಟೆ,ಏ.6 : ಮನುಕುಲಕ್ಕೆ ಮಾದರಿ ಎನ್ನುವಂತಹ ಕೊಡುಗೆ ನೀಡಿದ ಹಸಿರು ಕ್ರಾಂತಿಯ ಹರಿಕಾರದಾದ ಡಾ.ಬಾಬು ಜಗಜೀವನರಾಂ ಅವರ ಮಾರ್ಗರ್ದಶನದಲ್ಲಿ ನಾವೆಲ್ಲರೂ ನಡೆಯುವುದು ಅವಶ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಂ ಅವರ 114ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಸಿರು ಕ್ರಾಂತಿಯ ಹರಿಕಾರ, ಉತ್ತಮ ಸಂಸದೀಯ ಪಟು ಡಾ.ಬಾಬು ಜಗಜೀವನರಾಂ ಅವರು ನಡೆದು ಬಂದ ದಾರಿ, ಹೋರಾಟ ಹಾಗೂ ಅವರ ತತ್ವಸಿದ್ದಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಆರ್.ದುರ್ಗಾದಾಸ್ ಮಾತನಾಡಿ ಮಾನವೀಯತೆ, ಮನುಷ್ಯತ್ವಕ್ಕೆ ಹೆಸರಾದ ಡಾ.ಬಾಬು ಜಗಜೀವನರಾಂ ಅವರು 1914 ರಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಮೂಲಕ ನಂತರ ಮೆಟ್ರಿಕ್ ಪರೀಕ್ಷೆ, ಬಿಎಸ್‍ಸ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ರಾಜಕೀಯದಲ್ಲಿ ಕಾರ್ಮಿಕ ಹಾಗೂ ಸಾರಿಗೆ ಹಾಗೂ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅತೀ ಹೆಚ್ಚು ಅಂದರೆ 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದು, ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಅಭಿವೃದ್ದಿ ಕಾರ್ಯದಲ್ಲಿ ಎಲ್ಲರೂ ಸಂಘಟಿತರಾಗಬೇಕು. ಮೇಲು ಕೀಳು ಎಂಬ ಭಾವನೆ ಹೊಂದದೆ ಸ್ವಾಭಿಮಾನಿಯಾಗಿ ಹೋರಾಟ ರೂಡಿಸಿಕೊಂಡವರು ಬಾಬು ಜಗಜೀವನರಾಂ. ಜ್ಯಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ. ಜಾತಿ, ಮೇಲು, ಕೀಳು ಎಂಬ ಭಾವನೆ ಹೋಗಲಾಡಿಸಲು ಗುರುವಿನ ಪಾತ್ರ ಬಹುಮುಖ್ಯವಾಗಿದೆ. ಈ ಕುರಿತು ಜಗಜೀವರಾಂ ಅವರ ಬಾಲ್ಯದಲ್ಲಿನ ಪ್ರಸಂಗವೊಂದನ್ನು ದುರ್ಗಾದಾಸ್ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿ ಕೊನೆಯಲ್ಲಿ ಜಗಜೀವನರಾಂ ಅವರ ಕುರಿತು ರಚಿಸಿದ ಹಾಡನ್ನು ಹಾಡುವದರ ಜೊತೆ ಜೊತೆ ಎಲ್ಲರನ್ನು ವಂದಿಸಿದರು.