ಜಗಜೀವನರಾಂ, ಅಂಬೇಡ್ಕರ ಜಯಂತಿ ಸರಳ, ಆಚರಣೆಗೆ ನಿರ್ಧಾರ

ಗದಗ,ಏ2: ಕೋವಿಡ್-19 ಹಿನ್ನಲೆಯಲ್ಲಿ ಏಪ್ರೀಲ್ 5 ರಂದು ಜರುಗಲಿರುವ ಡಾ.ಬಾಬು ಜಗಜೀವನರಾಂ ಅವರ 114ನೇ ಜಯಂತಿ ಹಾಗೂ ಏಪ್ರೀಲ್ 14 ರಂದು ಜರುಗಲಿರುವ ಡಾ.ಬಿ.ಆರ್.ಅಂಬೇಡ್ಕರ ಅವರ 130ನೇ ಜಯಂತಿಯನ್ನು ಅರ್ಥಪೂರ್ಣ ಹಾಗೂ ಸರಳವಾಗಿ ಜಿಲ್ಲಾಡಳಿತದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದ ಮುಖ್ಯ ಸಭಾಭವನದಲ್ಲಿ ನಡೆದ ಜಗಜೀವನರಾಂ ಮತ್ತು ಅಂಬೇಡ್ಕರ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷವೂ ಸಹ ಕೋವಿಡ್ 2ನೇ ಅಲೆಯಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ಸರಕಾರದ ಮಾರ್ಗ ಸೂಚಿಯನ್ವಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಾರ್ವಜನಿಕರು ಸೀಮಿತ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣ ಆಚರಿಸಿ ಯಶಸ್ವಿಗೊಳಿಸುವಂತೆ ಸಭೆಯಲ್ಲಿ ವಿನಂತಿಸಿದರು.

ಅಂಬೇಡ್ಕರ ಜಯಂತಿಯಂದು ನಗರಸಭೆ ಆವರಣದಲ್ಲಿರುವ ಅಂಬೆಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪ ಅರ್ಪಿಸಿ ನಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸರಳವಾಗಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಇದರ ಜೊತೆಗೆ ರಸಪ್ರಶ್ನೆ, ಚಾಯಾಚಿತ್ರ ಸ್ಪರ್ದೆ, ಕ್ವೀಜ್, ಪ್ರಬಂಧ, ನಾಟಕ ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ನಡೆಸುವ ಮೂಲಕ ಅವರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸಲಾಗುವುದು ತಿಳಿಸಿದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿ ಕೋವಿಡ್ 2ನೇ ಅಲೇ ಹಿನ್ನಲೆಯಲ್ಲಿ ಮೆರವಣಿಗೆ ಮಾಡುವುದನ್ನು ಸರಕಾರ ನಿಷೇಧಿಸಿದೆ. ಸರಕಾರ ಹೊರಡಿಸಿದ ನಿಯಮಗಳನ್ನು ಪಾಲಿಸುವ ಮೂಲಕ ಅರ್ಥಪೂರ್ಣವಾಗಿ ಜಗಜೀವನರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರವರ ಜಯಂತಿಯನ್ನು ಆಚರಿಸೋಣ ಎಂದರು. ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು ಹಾಗೂ ಯುವಕರು ತಮ್ಮ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಸರಕಾರ ಮಾರ್ಚ 14 ರಿಂದ ಏಪ್ರೀಲ್ 14 ವರೆಗೆ ಪರಿವರ್ತನಾ ಮಾಸಾಚರಣೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದ್ದು, ಅದರಂತೆ ವಸತಿ ನಿಲಯಗಳ ಸ್ವಚ್ಚತೆ ಕಾರ್ಯ, ಸಸಿ ನೆಡುವುದು, ವಸತಿ ನಿಲಯ ಆಚರಣದಲ್ಲಿ ಕೈತೋಟ ನಿರ್ಮಾಣ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ ಸತೀಶ್ ಕುಮಾರ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.