ಜಂಬಗಿ ಲಾಲಸಾ ಗೀಗೀ ಹಾಡಿನ ಸರದಾರಃ ಮಹೇಶ ಹದಿಮೂರ

ಇಂಗಳೇಶ್ವರ, ಡಿ.1– ವಿಜಯಪುರದ ಇಂಗಳೇಶ್ವರದಲ್ಲಿ ಬಸವ ನಾಡಿನ ಸಾಹಿತ್ಯಮತ್ತು ಸಂಸ್ಕøತಿಕ ಬಳಗದ ಮಾಸಿಕ ಸಭೆ ಜರುಗಿತು. ಬಳಗವು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂಗಳೇಶ್ವರದ ಸಾಧಕರು ಮಾಲಿಕೆಯಲ್ಲಿ ಮಹೇಶ ಹದಿಮೂರ ಮಾತನಾಡಿ ಲಾಲಸಾ ಜಂಬಗಿ ಓದು, ಬರಹ ಬಾರದಿದ್ದರು ಗೀಗೀ ಪದಗಳನ್ನು ತಮ್ಮ ಕರಗತ ಮಾಡಿಕೊಂಡಿದ್ದರು. ಜಾನಪದ ಗುಂಗಿನಲ್ಲಿ ಶಾಲೆ ಕಲಿಯುವುದನ್ನೆ ಬಿಟ್ಟಿದ್ದರು. ಆಶು ಪದಗಳನ್ನು ಕಟ್ಟಿ ಜನರನ್ನು ರಂಜಿಸುತ್ತಿದ್ದರು. ಹರದೇಶಿ ನಾಗೇಶಿ ಗೀಗೀ ಪದಗಳನ್ನು ಇಡಿ ರಾತ್ರಿಯೆಲ್ಲ ಹಾಡಿ ಜನರನ್ನು ಜಾಗೃತಗೊಳಿಸುತ್ತಿದ್ದರು. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಮುಂಬೈ, ಪೂನಾ, ಹೈದ್ರಾಬಾದ, ಮಂಗಳೂರು, ಮಾಪಸಾ, ಗೋಕಾಕ, ಅಥಣಿ ಮುಂತಾದ ನೂರಾರು ಊರುಗಳಲ್ಲಿ ಸಂಚರಿಸಿ ತಮ್ಮ 55ನೇ ವಯಸ್ಸಿನವರೆಗೂ ಜಾನಪದ ಗೀಗೀ ಹಾಡಿ ಗೀಗೀ ಹಾಡಿನ ಸರದಾರ ಎಂದು ಜಯಭೇರಿ ಸಾಧಿಸಿದರು.
ಬಳಗದ ಸಂಸ್ಥಾಪಕ ಸಿದ್ದಲಿಂಗಪ್ಪ ಹದಿಮೂರ ಪ್ರಾಸ್ತಾವಿಕವಾಗಿ ಮಾತನಾಡಿ ಬಳಗ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಾಹಿತಿ, ಕವಿಗಳು ತಮ್ಮನ್ನು ತಾವೆ ತೊಡಗಿಸಿಕೊಂಡಿದ್ದಾರೆ ಎಂದರು.
ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಅರವಿಂದ ಕುಲಕರ್ಣಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ಮಾತನಾಡಿ ಜಾನಪದ ಕಲೆ ಶ್ರೇಷ್ಠ ಕಲೆ, ಲಾಲಸಾಬ ಜಂಬಗಿ ಮತ್ತು ಮಗ ನಬಿಸಾಬರಿಂದ ಗೀಗೀ ಪದಗಳು ಉಳಿದಿವೆ. ಅವರು ಜನರಲ್ಲಿ ಸಂಪ್ರದಾಯ ಮುಂದುವರೆಸಿದ್ದಾರೆ ಎಂದರು.
ಹಿರಿಯ ವಚನಕಾರ ಈರಣ್ಣ ಬೆಕಿನಾಳ ಅವರು ಅಧ್ಯಕ್ಷತೆ ವಹಿಸಿ ಲಾಲಸಾಬ ಜಂಬಗಿ ಅವರ ಹಾಡುಗಾರಿಕೆ ಸ್ಮರಿಸುವದೊಂದಿಗೆ ಮಹೇಶ ಹದಿಮೂರ ಅವರಿಗೆ ಪ್ರೋತ್ಸಾಹಿಸಿದರು.
ಇದೇ ಸಂದರ್ಭದಲ್ಲಿ ನಬಿಸಾಬ ಜಂಬಗಿ, ಲಾಲಸಾಬ ಮುಜಾವರ ಮತ್ತು ಈರಪ್ಪ ಕೊಟಾರದ ಗೀಗೀ ಪದಗಳನ್ನು ಹಾಡಿ ಜನರನ್ನು ಸಂತೋಷ ಸಾಗರದಲ್ಲಿ ಮುಳುಗಿಸಿದರು.
ವಿಶ್ರಾಂತ ಶಿಕ್ಷಕ ಚಂದ್ರಶೇಖರ ಮೇಲಿನಮನಿ ಸ್ವಾಗತಿಸಿದರು. ಜಾನಪದ ಕಲಾವಿದ ಸಿದ್ದಪ್ಪ ಹದಿಮೂರ, ದುಂಡಪ್ಪ ತಕ್ಕೋಡ, ಶ್ರೀಶೈಲ ತಾಳಿಕೋಟಿ, ಶಿವಪ್ಪ ಬಾಗೇವಾಡಿ ಮುಂತಾದವರು ಹಾಜರಿದ್ದರು. ಶಿಕ್ಷಕ ಮಲ್ಲಪ್ ಅವಟಿ ಪ್ರಾಯೋಜಕತ್ವವಹಿಸಿ ಕಾರ್ಯಕ್ರಮ ನಿರ್ವಹಿಸಿದರು