ಜಂತುಹುಳ ನಿವಾರಣೆಗೆ ಗಮನಹರಿಸಿ: ಪೂವಿತಾ

ಚಾಮರಾಜನಗರ, ಮಾ.14:- ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟು ಮಾಡುವ ಜಂತುಹುಳು ಸಮಸ್ಯೆ ನಿವಾರಣೆಗೆ ಗಮನ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಂತುಹುಳದಿಂದ ದೇಹದಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ. ಜಂತುಹುಳದ ತೊಂದರೆಯು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲಾ ವಯಸ್ಸಿನವರಲ್ಲೂ ಈ ಲಕ್ಷಣಗಳನ್ನು ಕಾಣಬಹುದು. ಶಾಲೆ ಬಿಟ್ಟ ಮಕ್ಕಳು ಮತ್ತು ನಿಮ್ಮ ಸುತ್ತಮುತ್ತಲಿನ ಎಲ್ಲರಿಗೂ ಜಂತುಹುಳ ನಿವಾರಣಾ ದಿನದ ಪ್ರಾಮುಖ್ಯತೆಯನ್ನು ತಿಳಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್. ಪೂವಿತಾ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ ಮಕ್ಕಳು ವೈಯಕ್ತಿಕ ಸ್ವಚ್ಚತೆಗೆ ಒತ್ತು ನೀಡಬೇಕು. ಊಟಕ್ಕಿಂತ ಮುಂಚೆ ಊಟದ ನಂತರ ಕೈತೊಳೆಯುವುದು, ಪ್ರತಿನಿತ್ಯ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಹಲವಾರು ಕಾರಣಗಳಿಂದ ಮಕ್ಕಳಿಗೆ ದೇಹದಲ್ಲಿ ಜಂತುಹುಳ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಜಂತುಹುಳ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಗಳನ್ನು ವಿತರಿಸಲಾಯಿತು.
ಆರ್.ಸಿ.ಹೆಚ್. ಅಧಿಕಾರಿ ಡಾ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್, ವೈದ್ಯಾಧಿಕಾರಿ ಮಮತ, ಮುಖ್ಯ ಶಿಕ್ಷಕರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.