ಜಂತುಹುಳು ಸಮಸ್ಯೆ ನಿರ್ಲಕ್ಷ್ಯ ಬೇಡ

ಕೋಲಾರ, ನ.೨೬ :ದೈಹಿಕ ಬೆಳವಣಿಗೆಯ ಮೇಲೆ ದುಷ್ಪಪರಿಣಾಮ ಬೀರುವ ಜಂತು ಹುಳು ಸಮಸ್ಯೆಯನ್ನು ನಿರ್ಲಕ್ಷಿಸಬಾರದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ತಿಳಿದರು.
ತಾಲೂಕಿನ ಹರಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತ ಹೀನತೆ ಹಾಗೂ ಅಪೌಷ್ಟಿಕತೆ ಉಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಆರೋಗ್ಯ ಹದಗೆಟ್ಟರೆ ವಿದ್ಯಾವಂತರಾಗಲು ಸಾಧ್ಯವಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ ಎಂದರು.
ಆರೋಗ್ಯ ನಿರೀಕ್ಷಕರಾದ ಆರ್.ರಮಾದೇವಿ ಮಾತನಾಡಿ ಜಂತುಹುಳು ಮಾತ್ರೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಜಂತುಹುಳು ಕಾರಣವಾಗುವುದು. ಬಹಿರ್ದೆಸೆ ಹಾಗೂ ಕಲುಷಿತ ಪ್ರದೇಶದಿಂದ ಉತ್ಪತ್ತಿಯಾಗುವ ಜಂತುಹುಳು ಮಕ್ಕಳ ದೇಹ ಸೇರಿದಾಗ ಶೇ.೪೦-೫೦ ರಕ್ತ ಹೀನತೆಯ ಜೊತೆಗೆ ಮಾರಣಾಂತಿಕ ಸ್ಥಿತಿಗೆ ತಲುಪುವ ಸಾಧ್ಯತೆಯೂ ಇರುತ್ತದೆ ಎಂದರು.
ಸಮುದಾಯ ಅರೋಗ್ಯ ಅಧಿಕಾರಿ ಹೆಚ್.ಸಿ. ನಾರಾಯಣಸ್ವಾಮಿ ಮಾತನಾಡಿ ಶುಚಿತ್ವ ಹಾಗೂ ಬಯಲು ಮಲ ವಿಸರ್ಜನೆಯಿಂದ ಮಗುವಿಗೆ ಬೇಗ ರೋಗ ತಗುಲುವ ಸಾಧ್ಯತೆ ಹೆಚ್ಚಿದ್ದು, ಮಕ್ಕಳು ಶುಚಿತ್ವದ ಬಗ್ಗೆ ಗಮನ ಹರಿಸಬೇಕು. ಬೆರಳುಗಳ ಉಗುರುಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಕೈ ತೊಳೆದು ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಶಾಲಾ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದು, ಆಶಾ ಕಾರ್ಯಕರ್ತೆ ಮಂಜುಳ ಸಹ ಶಿಕ್ಷಕರಾದ ಗೋವಿಂದಪ್ಪ, ಸೊಣ್ಣೇಗೌಡ, ಮುನಿಯಪ್ಪ, ಮೀನ, ಮಮತ ಮತ್ತಿತರರು ಉಪಸ್ಥಿತರಿದ್ದರು.