ಜಂತುಹುಳು ನಿವಾರಣಾ ದಿನ: ಜಿಲ್ಲೆಯ 6,16,961 ಮಕ್ಕಳಿಗೆ ಔಷಧಿ ನೀಡುವ ಗುರಿ


ಧಾರವಾಡ, ನ.23: ಪ್ರತಿ ಆರು ತಿಂಗಳಿಗೊಮ್ಮೆ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆಯನ್ನು ಪಡೆಯಬೇಕು. ಮಕ್ಕಳ ಉತ್ತಮ ಆರೋಗ್ಯ ಮತ್ತು ಬೆಳವಣಿಗೆಗಾಗಿ ಇದು ಮುಖ್ಯವಾಗಿದೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಒಟ್ಟು 6,16,961 ಮಕ್ಕಳಿಗೆ ಜಂತು ನಿವಾರಣಾ ಔಷಧಿಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡದ ಹೆಣ್ಣು ಮಕ್ಕಳ ಟ್ರೆನಿಂಗ್ ಕಾಲೇಜು (ಟಿಸಿಡಬ್ಲು)ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೊಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಅಂಗವಾಗಿ ಧಾರವಾಡ ತಾಲೂಕಿನ 2,11,621 ಮತ್ತು ಹುಬ್ಬಳ್ಳಿ ತಾಲೂಕಿನ 2,44,919, ಕಲಘಟಗಿ ತಾಲೂಕಿನ 47,326 ಹಾಗೂ ಕುಂದಗೋಳ ತಾಲೂಕಿನ 48,849, ನವಲಗುಂದ ತಾಲೂಕಿನ64,246 ಸೇರಿದಂತೆ ಜಿಲ್ಲೆಯ ಒಟ್ಟು 6,16,961 ಮಕ್ಕಳಿಗೆ ಅಲ್ಬೆಂಡಝೋಲ್ ಔಷಧಿಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಸಿಇಓ, ಡಾ. ಬಿ.ಸುಶೀಲಾ ಅವರು ತಿಳಿಸಿದರು.
ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಸಂದರ್ಭದಲ್ಲಿ ಪ್ರತಿ ಮಗುವಿಗೂ ಅಲ್ಬೆಂಡಝೋಲ್ ಮಾತ್ರೆಯನ್ನು ತಲುಪಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಜಂತುನಿವಾರಣಾ ಔಷಧಿ ನೀಡಬೇಕೆಂದು ಅವರು ಸೂಚಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆಯನ್ನು ತಿನಿಸುವ ಮೂಲಕ ಜಿಲ್ಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಗೆ ಚಾಲನೆ ನೀಡಿದರು. ಕೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್.ಹಂಚಾಟೆ, ಆರ್‍ಸಿಎಚ್‍ಓ ಡಾ.ಎಸ್.ಎಂ.ಹೊನಕೇರಿ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ.ಕೆ.ಎನ್. ತನುಜಾ, ಎಚ್‍ಡಿಎಂಸಿ ಹೆರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶೋಭಾ ಮೂಲಿಮನಿ, ಅನ್ನದಾಸೋಹ ಯೋಜನೆಯ ಅಧಿಕಾರಿ ಮಾಯಾಚಾರಿ ಸೇರಿದಂತೆ ಇತರರು ಭಾಗವಹಿಸಿದ್ದರು.