ಜಂತುಹುಳು ನಿವಾರಕ ಮಾತ್ರೆ ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿ: ಡಾ.ಜನಾರ್ಧನ್

ಬಳ್ಳಾರಿ,ಏ.17: ನಗರದ ಮಿಲ್ಲರ್ಪೇಟೆ ಬಡಾವಣೆಯಲ್ಲಿ ಸಮುದಾಯ ಆಧಾರಿತ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಂಜಯ್ ಪಾಟೀಲ್ ಅವರು ಮಗುವಿಗೆ ಮಾತ್ರೆ ಚೀಪಿಸುವ ಮೂಲಕ ನಿನ್ನೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಏ.16 ರಿಂದ 30ರವರೆಗೆ ಈ ಅಭಿಯಾನ ನಡೆಯಲಿದೆ. ಒಟ್ಟು 2067 ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ಮಾಡುವ ಮೂಲಕ 8,96,385 ಮಕ್ಕಳಿಗೆ ಹಾಗು ಎಲ್ಲಾ 1-19 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ.
ಡಿಹೆಚ್‍ಓ ಡಾ.ಹೆಚ್ ಎಲ್ ಜನಾರ್ಧನ್ ಮಾತನಾಡಿ,ಜಂತು ನಿವಾರಣೆಯಿಂದ ಮಕ್ಕಳಿಗೆ ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆಯಾಗಲಿದೆ. ರೋಗ ನಿರೋಧಕ ಶಕ್ತಿಯ ಸುಧಾರಣೆ, ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ, ಕರ್ತವ್ಯ ನಿರ್ವಹಣೆಯಲ್ಲಿ ಕ್ಷಮತೆ, ಜೀವನ ನಿರ್ವಹಣೆಯಲ್ಲಿ ಸುಧಾರಣೆ, ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ಜಂತುಹುಳು ನಿವಾರಕ ಮಾತ್ರೆ ಮಕ್ಕಳು ಮತ್ತು ವಯಸ್ಕರರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ವಿವರಿಸಿದ ಅವರು ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಆರ್. ಅನಿಲ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ ಮಾತನಾಡಿದರು. ಮಿಲ್ಲರ್ ಪೇಟೆ ನಗರ ಆರೋಗ್ಯ ಕೇಂದ್ರದ ಡಾ.ಸೌಜನ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ದಾಸಪ್ಪನವರ, ಡಾ.ಪಾವನಿ, ಮನೋಹರ್, ಸುರೇಶ್ , ಶಾಂತಮ್ಮ ಮೊದಲಾದವರು ಇದ್ದರು.