
ದೇವದುರ್ಗ: ಮಗುವಿನ ಭವಿಷ್ಯ, ಉತ್ತಮ ಆರೋಗ್ಯ ಹಾಗೂ ಶೈಕ್ಷಣಿಕ ಬೆಳವಣಿಗೆ, ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಮಗು ಕೂಡ ಜಂತುಹುಳು ನಿವಾರಣೆ ಮಾತ್ರೆ ಸೇವಿಸಬೇಕು ಎಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ಸಹಾಯಕಿ ವಾಣಿಶ್ರೀ ಹೇಳಿದರು.
ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಮಕ್ಕಳಲ್ಲಿ ಬಾಧಿಸುವ ಜಂತುಹುಳು ನಿವಾರಣೆಗೆ ಅಲ್ಬೆಂಡಾಜೋಲ್ ಮಾತ್ರೆ ನುಂಗಿಸಬೇಕು.
ಜಂತುಹುಳ ನಾಶ ಮಾಡಲು ೨ರಿಂದ ೧೯ವರ್ಷದೊಳಗಿನ ಮಕ್ಕಳು ಹಾಗೂ ಯುವಕರು ಒಂದು ಮಾತ್ರೆಯನ್ನು ತಪ್ಪದೇ ತೆಗೆದುಕಳ್ಳುವ ಮೂಲಕ ಜಂತುಹುಳಗಳಿಂದ ರಕ್ಷಿಸಿಕೊಳ್ಳಬೇಕು. ದೇಹದಲ್ಲಿ ತತ್ತಿ ರೂಪದಲ್ಲಿ ಜಂತುಹುಳು ಹುಟ್ಟಿ ಹಲವು ತೊಂದರೆಗಳನ್ನು ನೀಡುತ್ತದೆ. ಹೀಗಾಗಿ ರೋಗ ನಿರ್ಮೂಲನೆಗೆ ಜನರು ಇಲಾಖೆ ಜತೆ ಕೈಜೋಡಿಸಬೇಕು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬಂದು ಜಂತುಹುಳ ಮಾತ್ರೆ ವಿತರಿಸುತ್ತಾರೆ. ತಪ್ಪದೆ ಪಡೆದು ಸೇವನೆ ಮಾಡಬೇಕು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ವಿಜಯಕುಮಾರ್ ಅತ್ತನೂರು, ವೀರೇಶ ಮಾಚನೂರ್, ಹನುಮಂತರಾಯ, ಆಶಾ ಕಾರ್ಯಕರ್ತೆ ಸವಿತಾ ನಾಯಕ, ಸರಸ್ವತಿ ಇತರರಿದ್ದರು.